ಎರಡು ವಾರಗಳ ಚಿತ್ರೀಕರಣಕ್ಕೆ ಅಕ್ಷಯ್​ ಸಂಭಾವನೆ ಎಷ್ಟು? ಕೇಳಿದರೆ ಬೆಚ್ಚಿಬೀಳ್ತೀರಿ ...

Akshay Kumar - Final
Published on

ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು? ಎಂದು ಪ್ರಶ್ನಿಸಿದರೆ, ಮೊದಲು ಬರುವ ಹೆಸರು ಅಕ್ಷಯ್​ ಕುಮಾರ್​ ಅವರದ್ದು. ಸತತ ಹಿಟ್​ಗಳಿಂದ ಅಕ್ಷಯ್​ ಅವರ ಸಂಭಾವನೆಯಲ್ಲಿ ಭಾರಿ ಏರಿಕೆಯಾಗಿದ್ದು, ಒಂದು ಚಿತ್ರಕ್ಕೆ ಅವರು ನೂರು ಕೋಟಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.

ಇದು ಒಂದು ಚಿತ್ರದ ಮಾತು. ಅತಿಥಿ ಪಾತ್ರಕ್ಕೆ ಅವರು ಎಷ್ಟು ಪಡೆಯುತ್ತಾರೆ ಎಂಬ ಪ್ರಶ್ನೆ ಬರುವುದು ಸಹಜವೇ. ಮೂಲಗಳ ಪ್ರಕಾರ, ಅಕ್ಷಯ್​ ಕುಮಾರ್​ ಹೊಸ ಚಿತ್ರವೊಂದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಎರಡು ವಾರಗಳ ಚಿತ್ರೀಕರಣಕ್ಕೆ ಅವರು 27 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, 'ಸತರಂಗಿ ರೇ' ಎಂಬ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಅತಿಥಿ ಎಂದರೆ ಒಂದೆರೆಡು ದೃಶ್ಯಗಳ ಅಥವಾ ಒಂದೆರೆಡು ದಿನಗಳ ಚಿತ್ರೀಕರಣ ಪಾತ್ರವಲ್ಲ. ಸ್ವಲ್ಪ ದೊಡ್ಡ ಪಾತ್ರವೇ. ಆದರೆ, ಅವರು ನಾಯಕ ಅಲ್ಲ ಅಷ್ಟೇ. ಈ ಚಿತ್ರದಲ್ಲಿ ತಮಿಳು ನಟ ಧನುಶ್​ ನಾಯಕನಾಗಿ ನಟಿಸುತ್ತಿದ್ದು, ಅಕ್ಷಯ್​ ಕುಮಾರ್​ ಸ್ವಲ್ಪ ದೊಡ್ಡದಾದ ಅತಿಥಿ ಪಾತ್ರವಂತೆ. ಅಕ್ಷಯ್​ ಈ ಚಿತ್ರಕ್ಕೆ ಎರಡು ವಾರಗಳ ಚಿತ್ರೀಕರಣ ಮಾಡಬೇಕಿದ್ದು, ಅದಕ್ಕೆ 27 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.

ಅಂದರೆ, ದಿನಕ್ಕೆ ಎರಡು ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ದಿನಕ್ಕೆ ಎರಡು ಕೋಟಿ ಎಂದರೂ, 14 ದಿನಗಳಿಗೆ 28 ಕೋಟಿ ರೂಪಾಯಿಯಾಗುತ್ತದೆ. ಹಾಗಿರುವಾಗ ಒಂದು ಕೋಟಿ ಕನ್ಸೆಷನ್​ ಯಾಕೆ ಎಂಬ ಪ್ರಶ್ನೆ ಬರಬಹುದು.

ಅದಕ್ಕೂ ಕಾರಣವಿದೆ. ಅದೇನೆಂದರೆ ಅಕ್ಷಯ್​ ಕುಮಾರ್​ ಅವರ ಲಕ್ಕಿ ನಂಬರ್​ ಒಂಬತ್ತಂತೆ. ಅದೇ ಕಾರಕ್ಕೆ ಅವರು ಒಂಬತ್ತು ಬರುವಂತೆ ತಮ್ಮ ಸಂಭಾವನೆ ಪಡೆಯುತ್ತಾರೆ. ಎರಡು ಮತ್ತು ಏಳು ಕೂಡಿದರೆ ಒಂಬತ್ತಾಗುವುದರಿಂದ ಅವರು 27 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net