

ಮುಂಬೈ: ಕಡಿಮೆ ಸಮಯದಲ್ಲಿ ಚಿತ್ರಗಳನ್ನು ಮುಗಿಸುವುದರಲ್ಲಿ ಅಕ್ಷಯ್ ಕುಮಾರ್ ಬಹಳ ಜನಪ್ರಿಯ. ಬೇರೆ ನಟರು ವರ್ಷಕ್ಕೋ, ಎರಡು ವರ್ಷಕ್ಕೋ ಒಂದು ಚಿತ್ರದಲ್ಲಿ ನಟಿಸಿದರೆ, ಅಕ್ಷಯ್ ಕುಮಾರ್ ಅಭಿನಯದ ಮಿನಿಮಮ್ ನಾಲ್ಕು ಚಿತ್ರಗಳಾದರೂ ಬಿಡುಗಡೆಯಾಗಿವೆ. ಇದೇ ವರ್ಷವನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಈ ವರ್ಷ ಅಕ್ಷಯ್ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದು, ನಾಲ್ಕಕ್ಕೆ ನಾಲ್ಕೂ ಫ್ಲಾಪ್ಗಳಾಗಿವೆ. ಈ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
ಪ್ರಮುಖವಾಗಿ, ಅಕ್ಷಯ್ ಕುಮಾರ್ ಅವರಿಗೆ ಡೆಡಿಕೇಷನ್ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದೇ ಆ ಚಿತ್ರಗಳ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಈ ಮಾತನ್ನು ಅಕ್ಷಯ್ ಒಪ್ಪುವುದಿಲ್ಲ. ನಾಲ್ಕು ಚಿತ್ರಗಳಲ್ಲಿ ನಟಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಬಗ್ಗೆ ಅನಾವಶ್ಯಕವಾಗಿ ಟೀಕೆ ಮಾಡುವವರಿಗೆ ತಮ್ಮದೇ ರೀತಿಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು, ‘ಕೆಲವರು ನಾನೇಕೆ ಪ್ರತಿ ದಿನ ಬೆಳಿಗ್ಗೆ ಬೇಗ ಏಳುತ್ತೇನೆ ಎಂದು ಪ್ರಶ್ನಿಸುತ್ತಾರೆ. ರಾತ್ರಿ ಯಾಕೆ ಅಷ್ಟು ಬೇಗ ಮಲಗುತ್ತೀನಿ ಎಂದು ಕೇಳುತ್ತಾರೆ. ರಾತ್ರಿ ಇರುವುದೇ ಮಲಗುವುದಕ್ಕೆ ಮತ್ತು ಬೆಳಿಗ್ಗೆ ಇರುವುದೇ ಕೆಲಸ ಮಾಡುವುದಕ್ಕೆ. ಇದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದ್ದಾರೆ.
ಅದರ ಜತೆಗೆ ತಮ್ಮ ಕೆಲಸದ ಬಗ್ಗೆ ಮಾತನಾಡುವ ಅವರು, ‘ನಾನೇಕೆ ಅಷ್ಟೊಂದು ಕೆಲಸ ಮಾಡುತ್ತೀನಿ ಎಂದು ಕೇಳುತ್ತಾರೆ. ವರ್ಷಕ್ಕೆ ನಾಲ್ಕು ಚಿತ್ರಳನ್ನೇಕೆ ಮಾಡುತ್ತೀಯ ಎನ್ನುತ್ತಾರೆ. ನನಗೆ ಕೆಲಸ ಮಾಡುವುದಕ್ಕೆ ಇಷ್ಟ ಮತ್ತು ಕೆಲಸ ಮಾಡುತ್ತಲೇ ಇರುತ್ತೇನೆ. ಇದರಿಂದ ಯಾರಿಗೆ ಏನು ಸಮಸ್ಯೆ ಎಂದು ನನಗೆ ಅರ್ಥವಾಗುವುದಿಲ್ಲ’ ಎಂದು ಹೇಳಿದ್ದಾರೆ.