

Ilayaraja : ಕಾಲಿವುಡ್ ಸೂಪರ್ಸ್ಟಾರ್ ಅಜಿತ್ ನಟನೆ ಸೂಪರ್ ಹಿಟ್ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾವನ್ನು ನೆಟ್ಫ್ಲಿಕ್ಸ್ ಒಟಿಟಿ ವೇದಿಕೆಯಿಂದ ತೆಗೆದುಹಾಕಲಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಸಲ್ಲಿಸಿದ ಅರ್ಜಿಯ ಮೇರೆಗೆ ಮದ್ರಾಸ್ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಹಕ್ಕುಸ್ವಾಮ್ಯ ಉಲ್ಲಂಘನೆ (ಕಾಪಿ ರೈಟ್) ಆರೋಪದ ಮೇಲೆ ಇಳಯರಾಜ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಾಲಯವು ಒಟಿಟಿ ಸೇರಿದಂತೆ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಗುಡ್ ಬ್ಯಾಡ್ ಅಗ್ಲಿ ಸಿನಿಮಾದ ಪ್ರದರ್ಶನವನ್ನು ನಿಷೇಧಿಸಿದೆ. ಅನುಮತಿಯಿಲ್ಲದೆ ತಮ್ಮ ಹಾಡುಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಇಳಯರಾಜ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಕಾಪಿ ರೈಟ್ ಉಲ್ಲಂಘನೆಯ ಆರೋಪ ಹೊರಿಸಿದ್ದು, 5 ಕೋಟಿ ರೂ. ಪರಿಹಾರ ನೀಡುವಂತೆ ಇಳಯರಾಜ ಕೋರಿದ್ದಾರೆ. ಆದರೆ, ಚಿತ್ರದ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್, ಚಿತ್ರದ ಹಾಡುಗಳ ಹಕ್ಕುಸ್ವಾಮ್ಯ ಹೊಂದಿರುವವರಿಂದ ಅನುಮತಿ ಪಡೆದಿರುವುದಾಗಿ ಹೇಳಿದ್ದಾರೆ.
ಅಂದಹಾಗೆ, 'ಒಟ್ಟಾ ರುಬಾ ತರೇನ್', 'ಇಲಮೈ ಇಡೋ ಇಡೋ' ಮತ್ತು 'ಎನ್ ಜೋಡಿ ಮಂಜ ಕುರುವಿ' ಹಾಡುಗಳನ್ನು 'ಗುಡ್ ಬ್ಯಾಡ್ ಅಗ್ಲಿ' ಚಿತ್ರದಲ್ಲಿ ಬಳಸಲಾಗಿದೆ. ಈ ಎಲ್ಲ ಹಾಡುಗಳು ಬಹಳ ಜನಪ್ರಿಯವಾಗಿದ್ದವು. ತಮ್ಮ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಆರೋಪಿಸಿ ಇಳಯರಾಜ ಅವರು ಈ ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ ಒಟಿಟಿ ವೇದಿಕೆಯಿಂದ ಗುಡ್ ಬ್ಯಾಡ್ ಅಗ್ಲಿ ಚಿತ್ರವನ್ನು ತೆಗೆಯಲಾಗಿದೆ.
ಈ ಹಿಂದೆ ಮಂಜುಮ್ಮೇಲ್ ಬಾಯ್ಸ್ ಚಿತ್ರದಲ್ಲಿ ತಮ್ಮ ಹಾಡುಗಳನ್ನು ಬಳಸಿದ್ದರ ವಿರುದ್ಧ ಇಳಯರಾಜ ಅವರು ಕಾನೂನು ಕ್ರಮ ಕೈಗೊಂಡಿರುವುದು ಕೂಡ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. (ಏಜೆನ್ಸೀಸ್)