ಹಾಲಿನ ಬದಲು ಮೊಸರು ಕದ್ದ ಅಭಿಮಾನಿಗಳು! ಅಜಿತ್ ಫ್ಯಾನ್ಸ್​ ಮೇಲೆ ಪೆಟ್ರೋಲ್​ ಬಾಂಬ್​​ ಎಸೆತ! ವಿಡಿಯೋ ವೈರಲ್...

Published on
ಸೌತ್​ನಲ್ಲಿ ಅಭಿಮಾನಿಗಳು ಸ್ಟಾರ್​ ನಟರನ್ನು ಎಷ್ಟು ಆರಾಧಿಸುತ್ತಾರೆ ಅಂತ ಹೇಳಲು ಅಸಾಧ್ಯ. ಯಾವುದೇ ಸ್ಟಾರ್​ ನಟರ ಚಿತ್ರ ರಿಲೀಸ್​ ಆದರೂ, ಆ ಚಿತ್ರತಂಡಕ್ಕಿಂತ ಹೆಚ್ಚು ಅಭಿಮಾನಿಗಳದ್ದೇ ಹವಾ ಇರುತ್ತೆ. ಸ್ಟಾರ್ ನಟನ ಕಟೌಟ್​ಗಳಿಗೆ ಹಾಲಿನ ಅಭಿಷೇಕ, ದೇವಸ್ಥಾನಗಳಲ್ಲಿ ಪೂಜೆಗಳನ್ನು ಮಾಡುತ್ತಾರೆ. ಆದರೆ, ಈ ಬಾರಿ ಒಂದು ವಿಚಿತ್ರವಾದ ಘಟನೆ ನಡೆದಿದೆ. ಹೌದು, ನಿರ್ಮಾಪಕರೊಬ್ಬರ ಕಾರಿಗೆ ಮೊಸರಿನ ಅಭಿಷೇಕ ನಡೆದಿದೆ. ಕಾಲಿವುಡ್​ನ ಖ್ಯಾತ ನಟ ಅಜಿತ್​ ಕುಮಾರ್ ಅವರ ಅಭಿಮಾನಿಗಳೇ ಇಂಥ ವಿಚಿತ್ರವಾದ ಕೆಲಸ ಮಾಡಿರುವುದು. ಫೆಬ್ರವರಿ.24 ರಂದು ಅಜಿತ್ ಅವರ ‘ವಲಿಮೈ’ ಸಿನಿಮಾ ತೆರೆಗಪ್ಪಳಿಸಿತು.
ಈ ಚಿತ್ರವನ್ನು ಬಾಲಿವುಡ್​ನ ಜನಪ್ರಿಯ ನಿರ್ಮಾಪಕ ಬೋನಿ ಕಪೂರ್ ಅವರು ನಿರ್ಮಾಣ ಮಾಡಿದ್ದಾರೆ. ಇನ್ನು, ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿದುಕೊಳ್ಳಲು ತಮಿಳುನಾಡಿನ ಒಂದು ಚಿತ್ರಮಂದಿರಕ್ಕೆ ಬೋನಿ ಕಪೂರ್ ಅವರು ಬಂದಿದ್ದು, ಅವರ ಕಾರಿನ ಮೇಲೆ ಅಜಿತ್ ಕುಮಾರ್ ಅಭಿಮಾನಿಗಳು ಮೊಸರಿನ ಅಭಿಷೇಕ ಮಾಡಿದ್ದಾರೆ. ಇದರಿಂದ, ಬೋನಿ ಕಪೂರ್ ಅವರ ಐಷಾರಾಮಿ ಕಾರು ತುಂಬಾ ಗಲೀಜಾಗಿದೆ. ಸದ್ಯ, ಅಭಿಮಾನಿಗಳು ಬೋನಿ ಕಪೂರ್ ಕಾರಿನ ಮೇಲೆ ಮಾಡಿರುವ ಮೊಸರಿನ ಅಭಿಷೇಕದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿದೆ.
ಮತ್ತೊಂದೆಡೆ, ಈ ಮೊಸರನ್ನು ಅಜಿತ್ ಅಭಿಮಾನಿಗಳು ಯಾವುದೋ ಅಂಗಡಿಯಿಂದ ಕದ್ದು ತಂದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಪದೇಪದೇ ರಿಲೀಸ್​ ಡೇಟ್​ ಬದಲಾಗುತ್ತಲೇ ಇದ್ದದು, ‘ವಲಿಮೈ’ ಸಿನಿಮಾ ಮೇಲಿನ ಅಜಿತ್ ಅಭಿಮಾನಿಗಳ ನಿರೀಕ್ಷೆಗಳನ್ನು ಹೆಚ್ಚು ಮಾಡಿತ್ತು. ಹಾಗಾಗಿ, ಅಜಿತ್ ಅವರ ಅಭಿಮಾನಿಗಳು ನಟಿನಿಗೆ ಹಾಲಿನ ಅಭಿಷೇಕ ಮಾಡಲು ಅಂತ ದುಡ್ಡು ಕೊಟ್ಟು ಹಾಲು ಖರೀದಿಸುವ ಬದಲು ಯಾವುದೋ ಅಂಗಡಿಯಲ್ಲಿ ಕಳ್ಳತನ ಮಾಡಿ ತಂದಿದ್ದಾರೆ ಎನ್ನಲಾಗಿದೆ. ಆದರೆ, ಅಭಿಮಾನಿಗಳಿಗೆ ಚಿತ್ರಮಂದಿರದ ಬಳಿಯೇ ಗೊತ್ತಾಗಿದೆ, ಅವರು ಕದ್ದಿರುವುದು ಹಾಲಿನ ಬದಲಿಗೆ ಮೊಸರು ಅಂತ.
ಅದೇ, ಮೊಸರನ್ನು ಬೋನಿ ಕಪೂರ್ ಅವರ ಕಾರಿನ ಮೇಲೆ ಸುರಿಯಲಾಗಿದೆ. ಇನ್ನೊಂದೆಡೆ, ಇದೇ ಸಂದರ್ಭದಲ್ಲಿ ಒಂದು ಭಯಾನಕ ಘಟನೆ ಕೂಡಾ ನಡೆದಿದೆ. ತಮಿಳುನಾಡಿನ, ಕೊಯಂಬತ್ತೂರಿನಲ್ಲಿ ನಟ ಅಜಿತ್ ಕುಮಾರ್ ಅಭಿಮಾನಿಗಳು ‘ವಲಿಮೈ’ ಸಿನಿಮಾವನ್ನು ನೋಡಲು ಫೆ.24 ರಂದು ಮುಂಜಾನೆಯೇ ಚಿತ್ರಮಂದಿರದ ಬಳಿ ಸೇರಿದ್ದಾಗ, ಅವರ ಮೇಲೆ ಯಾರೋ ಕಿಡಿಗೇಡಿಗಳು ಪೆಟ್ರೋಲ್​ ಬಾಂಬ್​ ಎಸೆದಿದ್ದಾರೆ ಎನ್ನಲಾಗುತ್ತಿದೆ. ಈ ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net