

'ಡಾರ್ಲಿಂಗ್' ಕೃಷ್ಣ ನಾಯಕರಾಗಿ ನಟಿಸಿರುವ 'ದಿಲ್ ಪಸಂದ್' ಚಿತ್ರವುವೆಂಬರ್ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗತ್ತಿದೆ. ಈ ಮಧ್ಯೆ, ಚಿತ್ರತಂಡದಿಂದ ಸರ್ಪ್ರೈಸ್ ಸುದ್ದಿಯೊಂದು ಹೊರಬಿದ್ದಿದ್ದು, ಅಜೇಯ್ ರಾವ್ ಚಿತ್ರದಲ್ಲೊಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ನಿರ್ಮಿಸಿರುವ 'ದಿಲ್ ಪಸಂದ್' ಚಿತ್ರವನ್ನು ಶಿವತೇಜಸ್ ನಿರ್ದೇಶನ ಮಾಡಿದ್ದಾರೆ. ಪ್ರೇಮಕಥೆಯೊಂದಿಗೆ ಫ್ಯಾಮಿಲಿ ಸೆಂಟಿಮೆಂಟ್ ಇರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯದ ಹಂತ ತಲುಪಿದ್ದು, ಸದ್ಯದಲ್ಲೇ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ, ಪ್ರಮಾಣ ಪತ್ರ ನೀಡಲಿದೆ.
ಅಂದಹಾಗೆ, ಅಜೇಯ್ ರಾವ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರೂ, ಚಿತ್ರಕ್ಕೆ ಟ್ವಿಸ್ಟ್ ಕೊಡುತ್ತಾರಂತೆ. ದ್ವಿತೀಯಾರ್ಧದಲ್ಲಿ ಅವರ ಪಾತ್ರ ಬರಲಿದ್ದು, ಚಿತ್ರಕ್ಕೆ ಅವರು ಯಾವ ತರಹ ಟ್ವಿಸ್ಟ್ ಕೊಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.
ಕೃಷ್ಣಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಮತ್ತು ಮೇಘ ಶೆಟ್ಟಿ ನಟಿಸಿದ್ದು, ಮಿಕ್ಕಂತೆ ಸಾಧು ಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಅರುಣಾ ಬಾಲರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈಗಾಗಲೇ 'ದಿಲ್ ಪಸಂದ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.