

ಮುಂಬೈ: ಬಾಲಿವುಡ್ನ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಅಜಯ್ ದೇವಗನ್ ಜತೆಯಾಗಿ ನಟಿಸುವುದು ಹೊಸ ವಿಷಯವೇನಲ್ಲ. ಈಗಾಗಲೇ ಅವರಿಬ್ಬರೂ 'ಮೇಜರ್ ಸಾಬ್', 'ಖಾಕಿ', 'ಸತ್ಯಾಗ್ರಹ' ಮುಂತಾದ ಚಿತ್ರಗಳಲ್ಲಿ ನಟಿಸದಿದ್ದಾರೆ.
'ಸತ್ಯಾಗ್ರಹ' ನಂತರ ಅವರಿಬ್ಬರೂ ಯಾವೊಂದು ಚಿತ್ರದಲ್ಲೂ ಜತೆಯಾಗಿ ನಟಿಸಿರಲಿಲ್ಲ. ಈಗ ಕೆಲವು ವರ್ಷಗಳ ನಂತರ ಅವರಿಬ್ಬರೂ 'ಮೇಡೇ' ಎಂಬ ಚಿತ್ರದಲ್ಲಿ ನಟಿಸುತ್ತಿರುವುದಷ್ಟೇ ಅಲ್ಲ, ಈ ಚಿತ್ರವನ್ನು ಅಜಯ್ ದೇವಗನ್ ನಿರ್ದೇಶನ ಮಾಡುತ್ತಿರುವುದು ವಿಶೇಷ.
ಲಾಕ್ಡೌನ್ ಸಮಯದಲ್ಲಿ ಅಜಯ್ ದೇವಗನ್ ಅವರು 'ಮೇಡೇ' ಚಿತ್ರದ ಸ್ಕ್ರಿಪ್ಟ್ ಮಾಡುತ್ತಾ ಕೂತಿದ್ದರಂತೆ. ಈ ಸಂದರ್ಭದಲ್ಲಿ ಒಂದು ಪಾತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿದರೆ ಚೆನ್ನಾಗಿರುತ್ತದೆ ಎಂದನಿಸಿ, ಅವರನ್ನು ಕೇಳಿದ್ದಾರೆ ಅಜಯ್. ಕಥೆ ಕೇಳಿದ ಅಮಿತಾಭ್ ಬಚ್ಚನ್ ಖುಷಿಯಾಗಿ ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಸಹ ನೀಡಿದ್ದಾರಂತೆ.
ಈ ಚಿತ್ರ ಮುಂದಿನ ವರ್ಷ ಪ್ರಾರಂಭವಾಗುವುದಕ್ಕೆ ಸಜ್ಜಾಗಿದ್ದು, ಸದ್ಯಕ್ಕೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ. ಈ ಚಿತ್ರದಲ್ಲಿ ಅಜಯ್ ದೇವಗನ್ ಅವರು ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಇದೆಯಾದರೂ, ಅಮಿತಾಭ್ ಬಚ್ಚನ್ ಅವರು ಯಾವ ಪಾತ್ರದಲ್ಲಿ ಇರುತ್ತಾರೆ ಎಂಬ ವಿಷಯವನ್ನು ಇನ್ನೂ ಬಹಿರಂಗಗಳಿಸಿಲ್ಲ.
ಈ ಚಿತ್ರವನ್ನು ಅಜಯ್ ದೇವಗನ್ ಅವರ ಅಜಯ್ ದೇವಗನ್ ಫಿಲ್ಮ್ಸ್ ಸಂಸ್ಥೆಯೇ ನಿರ್ಮಿಸಲಿದ್ದು, ಡಿಸೆಂಬರ್ನಲ್ಲಿ ಹೈದರಾಬಾದ್ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.