ರಾಜಕೀಯದಿಂದ ದೂರಾದರೆ ಅಪ್ಪ-ಮಗ? ವಿಜಯ್​ ಕುಟುಂಬದಲ್ಲಿ ಬಿರುಕು!

Vijay - Final 1
Published on

ಚೆನ್ನೈ: ಈ ರಾಜಕೀಯ ಎಂಬುದು ಎಂಥೆಂಥವರನ್ನೋ ದೂರ ಮಾಡಿಬಿಡುತ್ತದೆ. ಎಷ್ಟೋ ಕುಟುಂಬಗಳು ಈ ರಾಜಕೀಯದಿಂದಾಗಿ ಒಡೆದುಹೋಗಿವೆ ಎಂದರೆ ತಪ್ಪಿಲ್ಲ. ಈಗ ಕಾಲಿವುಡ್​ ನಟ ವಿಜಯ್​ ಅವರ ಕುಟುಂಬದಲ್ಲೂ ಬಿರುಕು ಮೂಡಿದ್ದು, ಅದಕ್ಕೆ ಕಾರಣ ರಾಜಕೀಯ ಎಂದು ಹೇಳಲಾಗುತ್ತಿದೆ.

ಈ ಹಿಂದೆ ವಿಜಯ್​ ಹೆಸರಿನಲ್ಲಿ ವಿಜಯ್​ ಮಕ್ಕಳ್​ ಇಯಕ್ಕಂ ಎಂಬ ಅಭಿಮಾನಿ ಸಂಘವಿತ್ತು. ಈಗ ಅದೇ ಹೆಸರನ್ನು ವಿಜಯ್​ ಅವರ ತಂದೆ ಮತ್ತು ಖ್ಯಾತ ನಿರ್ದೇಶಕ ಎಸ್​.ಎ. ಚಂದ್ರಶೇಖರ್​ ಚುನಾವಣಾ ಆಯೋಗದಲ್ಲಿ ದಾಖಲಿಸಿದ್ದಾರೆ. ಇದರಿಂದಾಗಿ ವಿಜಯ್​ ರಾಜಕೀಯ ಪಕ್ಷ ಸ್ಥಾಪಿಸಿದ್ದು, ಸದ್ಯದಲ್ಲೇ ರಾಜಕೀಯಕ್ಕೆ ಬರುತ್ತಾರೆ ಎಂಬ ಊಹಾಪೋಹಗಳು ಕೇಳಿ ಬಂದಿವೆ.

ತಮ್ಮ ತಂದೆ ಎಸ್​.ಎ. ಚಂದ್ರಶೇಖರ್​ ಅವರು ಸ್ಥಾಪಿಸಿರುವ ಅಖಿಲ ಭಾರತ ವಿಜಯ್​ ಮಕ್ಕಳ್​ ಇಯಕ್ಕಂ ಎಂಬ ರಾಜಕೀಯ ಪಕ್ಷಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಮತ್ತು ತಮಗೆ ರಾಜಕೀಯಕ್ಕೆ ಬರುವ ಯೋಚನೆಯೂ ಇಲ್ಲ ಎಂದು ಕಾಲಿವುಡ್​ ನಟ ವಿಜಯ್​ ಸ್ಪಷ್ಟಪಡಿಸಿದ್ದಾರೆ.

ಈ ವಿಷಯವಾಗಿ ಇದೀಗ ಮಾತನಾಡಿರುವ ವಿಜಯ್​ ಅವರ ತಾಯಿ ಮತ್ತು ಚಂದ್ರಶೇಖರ್​ ಅವರ ಪತ್ನಿ ಶೋಭಾ, ಅಪ್ಪ-ಮಗ ಮಾತನಾಡುವುದನ್ನು ಬಿಟ್ಟಿದ್ದಾರೆ ಎಂದು ಬಾಂಬ್​ ಸಿಡಿಸಿದ್ದಾರೆ. ಅಷ್ಟೇ ಅಲ್ಲ, ತಾವು ಪಕ್ಷದ ಖಜಾಂಚಿ ಸ್ಥಾನದಿಂದ ಕೆಳೆಗಿಳಿರುವುದಾಗಿಯೂ ಹೇಳಿಕೊಂಡಿದ್ದಾರೆ.

ಶೋಭಾ ಚಂದ್ರಶೇಖರ್​ ಅವರು ವಿಜಯ್​ ಮಕ್ಕಳ್​ ಇಯಕ್ಕಂ ಸಂಘದ ಖಜಾಂಚಿಯಾಗಿದ್ದರು. ಆದರೆ, ಅವರ ಪತಿ ಇನ್ನೊಂದು ಸಂಘ ಸ್ಥಾಪಿಸುತ್ತಿರುವುದಾಗಿ ಹೇಳಿ ಅವರಿಂದ ಸಹಿ ಮಾಡಿಸಿಕೊಂಡರಂತೆ. ಯಾವಾಗ ಅದು ಇನ್ನೊಂದು ಸಂಘವಲ್ಲ, ರಾಜಕೀಯ ಪಕ್ಷ ಎಂಬುದು ಶೋಭಾ ಅವರಿಗೆ ಗೊತ್ತಾಯಿತೋ, ತಕ್ಷಣವೇ ಹೊಸ ಪಕ್ಷಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನು ವಿಜಯ್​ ಅವರು ತಮ್ಮ ತಂದೆಯ ಜತೆಗೆ ಮಾತನಾಡುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಅವರು, ಯಾವಾಗ ರಾಜಕೀಯದ ಸಹವಾಸ ಬೇಡ ಎಂದರೂ ಚಂದ್ರಶೇಖರ್​ ಅವರು ಪಕ್ಷ ಸ್ಥಾಪಿಸುವುದಕ್ಕೆ ಮುಂದಾದರೋ, ವಿಜಯ್​ ಆಗಿನಿಂದಲೂ ತಮ್ಮ ತಂದೆಯ ಜತೆಗೆ ಮಾತನಾಡುತ್ತಿಲ್ಲ ಎಂದು ಶೋಭಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net