‘ಡಬ್ಬಿಂಗ್​ ಮಾಡೋಕೂ ನೀನು ಅರ್ಹಳಲ್ಲ!’; ಕಹಿ ಅನುಭವ ಬಿಚ್ಚಿಟ್ಟ ಐಶ್ವರ್ಯಾ ರೈ

Aish
Published on

ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್​ ಅವರದ್ದು ದೊಡ್ಡ ಹೆಸರು. ಅವರೊಂದಿಗೆ ಸಿನಿಮಾ ಮಾಡಬೇಕೆಂದರೆ ಈಗಲೂ ಸಾಲು ಗಟ್ಟಿ ನಿರ್ದೇಶಕರು ನಿಲ್ಲುತ್ತಾರೆ. ಆದರೆ, ಇದೇ ನಟಿ ಸಿನಿಮಾರಂಗದಲ್ಲಿ ಅನುಭವಿಸಿದ ಯಾತನೆ ತುಂಬ ದೊಡ್ಡದು. ಆ ಆರಂಭದ ದಿನಗಳನ್ನು ಸ್ವತಃ ಐಶ್ವರ್ಯಾ ನೆನಪು ಮಾಡಿಕೊಂಡಿದ್ದಾರೆ.

ಮಾಡೆಲಿಂಗ್​ ಕ್ಷೇತ್ರಕ್ಕೆ ಬರುವುದಕ್ಕೂ ಮುನ್ನ ಡಬ್ಬಿಂಗ್​ ಕಲಾವಿದೆಯಾಗಿ ಐಶ್ವರ್ಯಾ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದರು. ಅಲ್ಪ ಸ್ವಲ್ಪ ಆ ಕೆಲಸದಿಂದಾದರೂ ಸಿನಿಮಾ ಅವಕಾಶ ಮತ್ತು ಸಂಪಾದನೆ ಮಾಡಬಹುದೆಂಬ ಕನಸು ಅವರದ್ದಾಗಿತ್ತು. ಆದರೆ, ಸಾಕಷ್ಟು ಕಿರುತೆರೆಯ ಡಬ್ಬಿಂಗ್​ ಅವಕಾಶಗಳಿಂದ ಅವರನ್ನು ಕೈ ಬಿಡಲಾಗಿತ್ತು. ಡಬ್ಬಿಂಗ್ ಮಾಡೋಕೂ ನೀನು ಅರ್ಹಳಲ್ಲ ಎಂದು ಎಷ್ಟೋ ಮಂದಿ ಐಶ್ವರ್ಯಾ ಅವರನ್ನು ಹೀಯಾಳಿಸಿದ್ದರು.

‘ನಿನಗೆ ಡಬ್ಬಿಂಗ್​ ಮಾಡಲು ಬರುವುದಿಲ್ಲ. ನೀನು ಡಬ್ಬಿಂಗ್​ ಮಾಡಲು ಅರ್ಹಳೂ ಅಲ್ಲ. ಎಂದು ಸಾಕಷ್ಟು ಕಿರುತೆರೆ ಧಾರಾವಾಹಿಗಳಿಂದ ಅವಕಾಶಗಳನ್ನು ಕಳೆದುಕೊಂಡಿದ್ದೆ. ಆದರೆ, ವಿಶ್ವ ಸುಂದರಿ ಪಟ್ಟ ಒಲಿದ ಬಳಿಕ ಆ ಎಲ್ಲವೂ ಮರಳಿ ಬಂದಿತು. ಸಿನಿಮಾಗಳಲ್ಲಿ ನಾಯಕಿಯಾದೆ‘ ಎಂದು ಹೇಳಿಕೊಳ್ಳುತ್ತಾರೆ ಐಶ್ವರ್ಯಾ.

ಅದ್ಯಾವುದಕ್ಕೂ ಧೃತಿಗೆಡದ ಐಶ್ವರ್ಯಾ, 1994ರಲ್ಲಿ ಮಾಡೆಲಿಂಗ್​ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ದಿನದಿಂದ ದಿನಕ್ಕೆ ಒಳ್ಳೊಳ್ಳೆ ಮಾಡೆಲಿಂಗ್​ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಕೊನೆಗೆ ವಿಶ್ವ ಸುಂದರಿ ಪಟ್ಟವನ್ನೂ ಅಲಂಕರಿಸಿದರು. ಅಲ್ಲಿಂದ ಐಶ್ವರ್ಯಾ ಲಕ್​ ಬದಲಾಯಿತು. ಸಾಲು ಸಾಲು ಸಿನಿಮಾ ಅವಕಾಶಗಳು ಅವರನ್ನು ಅರಸಿ ಬಂದವು. ಅಲ್ಲಿಂದ ಕೇವಲ ಬಾಲಿವುಡ್​ ಮಾತ್ರವಲ್ಲ, ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ಮಿಂಚಿದರು.

ಸದ್ಯ ಮಣಿರತ್ನಂ ನಿರ್ದೇಶನದ ಸಿನಿಮಾವೊಂದರಲ್ಲಿ ನಾಯಕಿಯಾಗಿ ಐಶ್ವರ್ಯಾ ನಟಿಸುತ್ತಿದ್ದಾರೆ. ಇನ್ನೇನು ಶೀಘ್ರದಲ್ಲಿ ಅದರ ಶೂಟಿಂಗ್​ನಲ್ಲಿಯೂ ಅವರು ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net