

ಪ್ರತಿ ಜೀವರಾಶಿಯೂ ಒಂದಲ್ಲ ಒಂದು ದಿನ ಸಾವನ್ನಪ್ಪಬೇಕು. ಹುಟ್ಟು ಪ್ರಕೃತಿ ನಿಯಮ, ಸಾವು ನಿಶ್ಚಿತ. ಹಾಗಾದರೆ, ಇದೆಲ್ಲವೂ ಹೇಗೆ ಘಟಿಸುತ್ತವೆ? ಹೀಗೊಂದು ಪ್ರಶ್ನೆಗೆ ಉತ್ತರ ನೀಡಲು ‘ಅಘೋರ’ ಸಿನಿಮಾ ಮಾಡಿದ್ದಾರೆ ಎನ್.ಎಸ್. ಪ್ರಮೋದ್ ರಾಜ್. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಹಿಂದೆ ‘ಕವಿ’ ಎಂಬ ಚಿತ್ರ ನಿರ್ವಿುಸಿದ್ದ ಪುನೀತ್ ಗೌಡ, ಈ ಚಿತ್ರಕ್ಕೆ ಹಣ ಹೂಡಿ ಪ್ರಮುಖ ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ.
‘ಇಡೀ ಸಿನಿಮಾ ಪ್ರಕೃತಿ ಹಿನ್ನೆಲೆಯಲ್ಲಿದೆ. ಪ್ರಸ್ತುತ ಟ್ರೆಂಡ್ಗೆ ತಕ್ಕಂತೆ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಹಾರರ್ ಅಂಶವೂ ಸಿನಿಮಾದ ಹೈಲೈಟ್. ಪಾತ್ರವೂ ಅಷ್ಟೇ ವಿಶೇಷವಾಗಿದೆ’ ಎಂದರು. ಚಿತ್ರದಲ್ಲಿ ರಚನಾ ದಶರಥ್, ದ್ರವ್ಯ ಶೆಟ್ಟಿ ನಾಯಕಿಯರು. ಚಿತ್ರದಲ್ಲಿರುವ ಒಂದೇ ಹಾಡಿಗೆ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆಯುವುದರ ಜತೆಗೆ ಸಂಗೀತವನ್ನೂ ನೀಡಿದ್ದಾರೆ. ಈಗಾಗಲೇ ಹತ್ತು ಹಲವು ಸಿನಿಮೋತ್ಸವಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ.