ತಲೆಕೆಳಗಾದ ಲೆಕ್ಕಾಚಾರ: ಮತ್ತೆ ಚಿತ್ರಗಳ ಬಿಡುಗಡೆ ಮುಂದಕ್ಕೆ...

Yash
Published on

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕನ್ನಡದಲ್ಲಿ ಬಿಗ್ ಚಿತ್ರಗಳ ಬಿಡುಗಡೆ ಪರ್ವ ಮುಂದುವರಿಯಬೇಕಿತ್ತು. ‘ಯುವರತ್ನ’ ನಂತರ ಏಪ್ರಿಲ್ 15ಕ್ಕೆ ‘ಸಲಗ’ ಮತ್ತು ಇಂದು ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರಗಳು ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾ ಎರಡನೆಯ ಅಲೆಯಿಂದ ಅವೆಲ್ಲ ಚಿತ್ರಗಳು ಅನಿರ್ದಿಷ್ಟಾವಧಿ ಮುಂದಕ್ಕೆ ಹೋಗಿವೆ. ಈ ಚಿತ್ರಗಳು ಯಾವಾಗ ಬಿಡುಗಡೆ ಎಂದು ಸ್ವತಃ ಆ ಚಿತ್ರಗಳ ನಿರ್ವಪಕರಿಗೂ ಸ್ಪಷ್ಟತೆ ಇಲ್ಲ. ಪರಿಸ್ಥಿತಿ ತಿಳಿಯಾದ ಮೇಲೆ ನೋಡಿಕೊಂಡು, ಬಿಡುಗಡೆಯ ದಿನಾಂಕವನ್ನು ಪ್ರಕಟಿಸುವುದಾಗಿ ಹೇಳುತ್ತಾರೆ. ಬರೀ ಕನ್ನಡವಷ್ಟೇ ಅಲ್ಲ, ಬೇರೆ ಭಾಷೆಯ ಬಿಗ್ ಚಿತ್ರಗಳಿಗೂ ಕರೊನಾ ಎರಡನೆಯ ಅಲೆಯ ಬಿಸಿ ತಟ್ಟಿದೆ. ಕಳೆದ ವಾರವೇ ಕಂಗನಾ ರಣಾವತ್ ಅಭಿನಯದ ‘ತಲೈವಿ’ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ಈ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದ್ದು, ಮುಂದಿನ ದಿನಾಂಕವನ್ನು ಇನ್ನೂ ಚಿತ್ರತಂಡ ಘೊಷಿಸಿಲ್ಲ. ಮೇ 13ಕ್ಕೆ ಸಲ್ಮಾನ್ ಖಾನ್ ಅಭಿನಯದ ‘ರಾಧೆ - ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಮತ್ತು ಮೇ 14ಕ್ಕೆ ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರ ಬಿಡುಗಡೆ ಮಾಡುವುದಾಗಿ ಎರಡೂ ಚಿತ್ರತಂಡಗಳು ಘೊಷಿಸಿದ್ದವು. ಈ ಪೈಕಿ ಮೇ 13ರಂದು ಓಟಿಟಿಯಲ್ಲಿ 299ರೂಗೆ ‘ರಾಧೆ’ ಲಭ್ಯವಾಗಲಿದೆ. ಲಾಕ್​ಡೌನ್ ಇಲ್ಲದ ಕಡೆಗಳಲ್ಲಿ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ಕೆಜಿಎಫ್‌ ಕಥೆ ಏನು?

ಯಶ್ ಅಭಿನಯದ ‘ಕೆಜಿಎಫ್ 2’ ಜುಲೈ 16ಕ್ಕೆ ಬಿಡುಗಡೆ ಎಂದು ತಂಡ ಘೊಷಿಸಿಕೊಂಡಿದೆ. ಚಿತ್ರೀಕರಣ ಮುಗಿದು, ಚೇಸಿಂಗ್ ದೃಶ್ಯವೊಂದರ ಶೂಟಿಂಗ್ ಬಾಕಿ ಇದೆ. ಇದೀಗ ಸದ್ಯದ ಸ್ಥಿತಿಗತಿ ನೋಡಿದರೆ, ಮೂರನೇ ಸಲ ಬಿಡುಗಡೆಯನ್ನು ಮುಂದೂಡುವ ಸಾಧ್ಯತೆ ಇದೆ. ಸದ್ಯಕ್ಕೆ ಚಿತ್ರತಂಡ ಮಾತ್ರ ಈ ವಿಚಾರದಲ್ಲಿ ತಟಸ್ಥವಾಗಿದೆ. ಮಿಕ್ಕಂತೆ ಬಾಲಿವುಡ್​ನಲ್ಲಿ ‘ಗಂಗೂಬಾಯಿ ಕಥೈವಾಡಿ’, ‘ಸತ್ಯಮೇವ ಜಯತೇ 2’, ‘ತೂಫಾನ್’ ಚಿತ್ರಗಳು ಮುಂದಿನ ಕೆಲವು ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಇವುಗಳೂ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.

ಯಾವ ಸಿನಿಮಾ ಯಾವಾಗ ಬರುತ್ತೆ?

ಚಿರಂಜೀವಿ ಅವರ ‘ಆಚಾರ್ಯ’ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದು, ಆಗಸ್ಟ್​ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಸದ್ಯಕ್ಕೆ ಹೇಳಲಾಗುತ್ತಿದೆ. ಹಾಗಾದರೆ, ಆಗಸ್ಟ್ 13ಕ್ಕೆ ಬಿಡುಗಡೆಯಾಗಬೇಕಿದ್ದ ಅಲ್ಲು ಅರ್ಜುನ್ ಅವರ ‘ಪುಷ್ಪ’ ಕಥೆಯೇನು ಎಂಬ ಪ್ರಶ್ನೆ ಸಹಜ. ಆ ಚಿತ್ರದ ಚಿತ್ರೀಕರಣ ಇನ್ನೂ ಮುಗಿದಿಲ್ಲ. ಈ ಮಧ್ಯೆ, ಅಲ್ಲು ಅರ್ಜುನ್​ಗೆ ಕರೊನಾ ಪಾಸಿಟಿವ್ ಆಗಿರುವುದರಿಂದ, ಚಿತ್ರೀಕರಣವನ್ನು ಮುಂದೂಡಲಾಗಿದೆ. ಹೀಗಿರುವಾಗ ಈ ಚಿತ್ರ ಆಗಸ್ಟ್​ನಲ್ಲಿ ಬರುವುದು ಡೌಟ್! ಆಗ ‘ಆಚಾರ್ಯ’ ತೆರೆಕಂಡರೂ ಅಚ್ಚರಿಯಿಲ್ಲ. ಈ ನಡುವೆ ಅ. 13ರಂದು ರಾಜಮೌಳಿ ‘ಆರ್​ಆರ್​ಆರ್’ ಬಿಡುಗಡೆಯ ಸರತಿಯಲ್ಲಿದೆ. ಈ ರಿಲೀಸ್ ಟ್ರಾಫಿಕ್​ನಿಂದ ತಪ್ಪಿಸಿಕೊಳ್ಳಲು ನೇರವಾಗಿ 2022ರ ಸಂಕ್ರಾಂತಿಗೆ ಚಿತ್ರ ತೆರೆಕಾಣಲಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net