ಸಾವೊಂದೇ ಕೊನೇ ಆಯ್ಕೆ, ನಾನು ಸತ್ತರೆ ಆತನೇ ಕಾರಣ ಎಂದು ವಿಡಿಯೋ ಹರಿಬಿಟ್ಟ ನಟಿ ವಿಜಯಲಕ್ಷ್ಮೀ!

Vijayalakshmi
Published on

ಚೆನ್ನೈ: ನಟಿ ವಿಜಯಲಕ್ಷ್ಮೀ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ. ಸೂರ್ಯವಂಶ, ಜೋಡಿ ಹಕ್ಕಿ, ಸ್ವಸ್ತಿಕ್​ ಹಾಗೂ ಹಬ್ಬ ಸೇರಿದಂತೆ ಸಾಕಷ್ಟು ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿರುವುದು ಒಂದೆಡೆಯಾದರೆ, ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಚಾರಗಳಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.

ಏನೇ ಆದರೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುವ ವಿಜಯಲಕ್ಷ್ಮೀ ತನಗೆ ವಂಚನೆಯಾಗಿದೆ ಮತ್ತು ನಾನು ತುಂಬಾ ಕಷ್ಟದಲ್ಲಿ ಇದೇನೆ ಎಂದು ಹೇಳಿಕೊಳ್ಳುತ್ತಲೇ ಇರುತ್ತಾರೆ. ಅವರ ತಾಯಿ ತೀರಿಕೊಂಡಾಗ ಹಣವಿಲ್ಲದೇ ಪರದಾಡುತ್ತಿದ್ದ ವಿಜಯಲಕ್ಷ್ಮೀ ಅವರಿಗೆ ಕರ್ನಾಟಕದ ಆಶ್ರಮವೊಂದು ಮುಂದೆ ಬಂದು ಹಣ ಸಂಗ್ರಹ ಮಾಡಿ, ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸಿಕೊಟ್ಟಿದ್ದರು. ಆದರೆ, ಕೊನೆಯಲ್ಲಿ ಹಣಕಾಸಿನ ವಿಚಾರ ಬಂದಾಗ ಆಶ್ರಮ ವಿರುದ್ಧವೇ ವಿಜಯಲಕ್ಷ್ಮೀ ತಿರುಗಿಬಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು. ಇದು ವಿವಾದಕ್ಕೆ ತಿರುಗಿ ವಿಜಯಲಕ್ಷ್ಮೀ ವಿರುದ್ಧವೂ ಭಾರೀ ಟೀಕೆಗಳು ಕೇಳಿಬಂದಿದ್ದವು.

ಸೀಮನ್​ ವಿರುದ್ಧ ನಿರಂತರ ಆರೋಪ

ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ತನಗೆ ಮೋಸ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿ, ಬಲವಂತವಾಗಿ 7 ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ಕೆಲವು ತಿಂಗಳುಗಳ ಹಿಂದೆ ತಮಿಳುನಾಡಿನ ನಾಮ್​ ತಮಿಳರ್​ ಕಟ್ಚಿ (ಎನ್​ಟಿಕೆ), ನಟ ಮತ್ತು ನಿರ್ದೇಶಕ ಸೀಮನ್​ ವಿರುದ್ಧ ಗಂಭೀರ ಆರೋಪ ಮಾಡಿ, ದೂರು ದಾಖಲಿಸಿದ್ದರು. ಈ ಸುದ್ದಿ ಭಾರಿ ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ಸೀಮನ್​ ಪೊಲೀಸ್​ ವಿಚಾರಣೆ ಸಹ ಎದುರಿಸಿದ್ದರು. ಇದೀಗ ಮತ್ತೊಂದು ವಿಡಿಯೋವನ್ನು ಹರಿಬಿಟ್ಟಿರುವ ವಿಜಯಲಕ್ಷ್ಮೀ, ಆತ್ಮಹತ್ಯೆಯೊಂದೇ ನನಗೆ ಉಳಿದಿರುವ ದಾರಿ ಎಂದಿದ್ದಾರೆ.

ವಿಡಿಯೋದಲ್ಲಿ ಏನಿದೆ? ಮಾಧ್ಯಮ ಸ್ನೇಹಿತರೇ ನಾನು ಫೆ.29ರಂದು ಸಾಮಾಜಿಕ ಜಾಲತಾಣದಲ್ಲಿ ನಾನೊಂದು ವಿಡಿಯೋ ಶೇರ್​ ಮಾಡಿಕೊಂಡಿದ್ದೆ. ಆ ವಿಡಿಯೋದಲ್ಲಿ ನನ್ನ ಜೊತೆ ಮಾತನಾಡುವಂತೆ ಮತ್ತು ಜತೆಗೆ ಇರಲು ಅವಕಾಶ ಮಾಡಿಕೊಡುವಂತೆ ಕೇಳಿದ್ದೆ. ಆದರೆ, ಸೀಮನ್​ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾನೀಗ ತುಂಬಾ ದುಃಖದಲ್ಲಿದ್ದೇನೆ. ನಾನು ಅಳುತ್ತಲೇ ವಿಡಿಯೋ ಕಳುಹಿಸಿದ್ದೆ. ನೀ ನನಗೆ ಬೇಕು... ನೀ ಇಲ್ಲದಿದ್ದರೆ ನಾನು ಸತ್ತು ಹೋಗುತ್ತೇನೆ ಎಂದು ಹೇಳಿದರೂ ಆತ ನನ್ನನ್ನು ಕೇರ್​ ಮಾಡಲೇ ಇಲ್ಲ. ನನ್ನನ್ನು ರಹಸ್ಯವಾಗಿ ಮದುವೆಯಾಗಿ, ನನ್ನ ಜೀವನವನ್ನೇ ಹಾಳು ಮಾಡಿದ್ದಾರೆ. ನನ್ನನ್ನು ನಡುರಸ್ತೆಯಲ್ಲಿ ಕೈಬಿಟ್ಟಿದ್ದಾರೆ. ಇದೀಗ ನನಗೆ ಯಾರ ಬೆಂಬಲವೂ ಇಲ್ಲ. ನನನ್ನು ಯಾರೂ ನೋಡಿಕೊಳ್ಳುತ್ತಿಲ್ಲ. ನಾನು ಕರ್ನಾಟಕದಲ್ಲೂ ಇರಲು ಆಗುತ್ತಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವಿಗೆ ಸೀಮನ್​ ಕಾರಣರಾಗುತ್ತಾರೆ ಮತ್ತು ಅವರೇ ವಿವರಣೆ ನೀಡಬೇಕಾಗುತ್ತದೆ ಎಂದು ಹೇಳಿ ಕಳೆದ ಮಂಗಳವಾರ ವಿಜಯಲಕ್ಷ್ಮೀ ಪೋಸ್ಟ್​ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ವಿಜಯಲಕ್ಷ್ಮೀ ಅವರು ಆತ್ಮಹತ್ಯೆ ವಿಚಾರವನ್ನು ಪ್ರಸ್ತಾಪ ಮಾಡಿರುವುದರಿಂದ ಕೂಡಲೇ ಮಧ್ಯಪ್ರವೇಶ ಮಾಡಿ ನಟಿಯನ್ನು ರಕ್ಷಣೆ ಮಾಡಿ ಎಂದು ಅನೇಕ ನೆಟ್ಟಿಗರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net