ಸೋಷಿಯಲ್ ಮೀಡಿಯಾದಿಂದ ತ್ರಿಷಾ ದೂರ ದೂರ...

trisha
Published on

ಬೆಂಗಳೂರು: ಸಿನಿಮಾ ಸೆಲೆಬ್ರಿಟಿಗಳು, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳ ಜತೆಗೆ ಸಂವಹನ ನಡೆಸುವುದು, ಸಿನಿಮಾಗಳ ಪ್ರಚಾರ ಮಾಡುವುದು, ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುವುದು ಇವೆಲ್ಲಾ ಸರ್ವೆಸಾಮಾನ್ಯ. ಆದರೆ, ಇದೀಗ ಅದೇ ಸೋಷಿಯಲ್ ಮೀಡಿಯಾಗಳಿಂದ ದೂರ ಇರಲು ಬಯಸಿದ್ದಾರೆ ಟಾಲಿವುಡ್ ನಟಿ ತ್ರಿಷಾ.

ತ್ರಿಷಾ ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಳ್ಳುವುದಕ್ಕೆ ಬಯಸಿದ್ದು, ಈ ರೀತಿಯ ದಿಢೀರ್ ನಿರ್ಧಾರ ಏಕೆ ಎಂಬುದಕ್ಕೆ ಸದ್ಯಕ್ಕೆ ಉತ್ತರ ಇಲ್ಲ. ಇತ್ತೀಚೆಗಷ್ಟೇ ಕೇರಳದಲ್ಲಿ ಗರ್ಭಿಣಿ ಆನೆಗೆ, ಪೈನಾಪಲ್​ನಲ್ಲಿ ಮದ್ದನ್ನಿಟ್ಟು ತಿನ್ನಿಸಿ ಹತ್ಯೆ ಮಾಡಲಾಗಿತ್ತು. ಆ ಘಟನೆಗೆ ಮರುಕ ವ್ಯಕ್ತಪಡಿಸಿ ಕೊನೇ ಪೋಸ್ಟ್ ಹಾಕಿದ್ದರು ತ್ರಿಷಾ. ಅದಾದ ಬಳಿಕ ಕೆಲವು ದಿನಗಳ ಕಾಲ ಜಾಲತಾಣಗಳಿಂದ ದೂರ ಉಳಿಯುವ ಬಗ್ಗೆ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದ ತ್ರಿಷಾ, ‘ಸೇಫ್ ಆಗಿರಿ, ಮನೆಯಲ್ಲಿಯೇ ಇರಿ. ಆದಷ್ಟು ಬೇಗ ಮತ್ತೆ ಮರಳುವೆ’ ಎಂದಿದ್ದರು. ಅದರಂತೆ ಕಳೆದ ನಾಲ್ಕು ದಿನಗಳಿಂದ ತ್ರಿಷಾ ಸೋಷಿಯಲ್ ಮೀಡಿಯಾಗಳಿಂದ ದೂರವಾಗಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಾವಿಗೂ ಅವರು ಸ್ಪಂದಿಸಿಲ್ಲ. ಲಾಕ್​ಡೌನ್ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾ ಗೀಳಿನಿಂದ ಹೊರಬರುವ ಉದ್ದೇಶದಿಂದ ಇತ್ತೀಚೆಗಷ್ಟೇ ಕಣ್ಸನ್ನೇ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್, ಇನ್​ಸ್ಟಾ ಮತ್ತು ಟ್ವಿಟರ್ ಬದಿಗಿಟ್ಟಿದ್ದರು. ಇದೀಗ ತ್ರಿಷಾ ಆ ಕೆಲಸ ಮಾಡಿದ್ದಾರೆ. ಅಂದಹಾಗೆ ಟ್ವಿಟರ್​ನಲ್ಲಿ 5ಮಿಲಿಯನ್​ಗೂ ಅಧಿಕ ಫಾಲೋವರ್ಸ್ ಹೊಂದಿರುವ ತ್ರಿಷಾಗೆ ಇನ್​ಸ್ಟಾಗ್ರಾಂನಲ್ಲಿ 2.4 ಮಿಲಿಯನ್ ಹಿಂಬಾಲಕರಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net