

ನವದೆಹಲಿ: ಇನ್ನೇನಿದ್ದರೂ ವಿದ್ಯುತ್ ಚಾಲಿತ ವಾಹನಗಳ ಕಾಲ ಎನ್ನುವವರೂ ಕೂಡ ಅವನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಾರೆ. ಕಾರಣ ಅವುಗಳ ಬೆಲೆ ಹಾಗೂ ಒಮ್ಮೆ ಚಾರ್ಜ್ ಮಾಡಿದರೆ ದೂರದ ಊರುಗಳಿಗೆ ತೆರಳಲು ಸಾಧ್ಯವಾಗುವುದಿಲ್ಲ ಎನ್ನುವುದು ಅಡ್ಡಿಯಾಗಿ ಪರಿಣಮಿಸಿದೆ.
ಅಮೆರಿಕದ ಟೆಸ್ಲಾ ಕಂಪನಿ ಸದ್ಯ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಹಾಗೂ ಅದಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಸದ್ಯ ಈ ಕಂಪನಿ ತಯಾರಿಸಿರುವ ಕಾರು 402 ಮೈಲುಗಳವರೆಗೆ (644 ಕಿ.ಮೀ)ಸಂಚರಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ ಬೆಂಗಳೂರಿನಿಂದ ಬೀದರ್ಗೆ ಸಾಗಬಹುದು. ಇದನ್ನು ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಖಚಿತಪಡಿಸಿದ್ದಾರೆ.
ಟೆಸ್ಲಾ ರೂಪಿಸಿರುವ ಎಸ್ ಮಾದರಿ ( model S ) ಕಾರು ಅಮೆರಿಕದ ಪರಿಸರ ರಕ್ಷಣಾ ಸಂಸ್ಥೆಯಿಂದ (ಇಪಿಎ) ಅಧಿಕೃತವಾಗಿ ಈ ಪ್ರಮಾಣ ಪತ್ರ ಪಡೆದಿದೆ. ಕಳೆದ ವರ್ಷ ವಿನ್ಯಾಸಗೊಳಿಸಿದ್ದ ಕಾರಿಗಿಂತಲೂ ಇದು ಶೇ.20 ಹೆಚ್ಚಿನ ಕ್ಷಮತೆ ಹೊಂದಿದೆ. ಅದೇ ಕಾರಿನ ಬ್ಯಾಟರಿ ವ್ಯವಸ್ಥೆಯನ್ನೇ ಈ ಮಾದರಿಯು ಹೊಂದಿದೆ ಎಂದು ಟೆಸ್ಲಾ ತಿಳಿಸಿದೆ.
ಕಾರಿನ ಚಾಲನಾ ದಕ್ಷತೆ ಹೆಚ್ಚಬೇಕೆಂದರೆ ಅದರ ಭಾರವನ್ನು ಕಡಿಮೆಗೊಳಿಸಬೇಕು. ಕಾರಿನ ಪ್ರತಿ ಬಿಡಿಭಾಗದ ಭಾರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಂಶೋಧನೆ ಮುಂದುವರಿದಿದೆ ಎಂದು ಮಾಹಿತಿ ನೀಡಿದೆ.
10 ಲಕ್ಷ ಮೈಲು ಅಥವಾ 16 ವರ್ಷ ಕಾಲ ಬಾಳಿಕೆ ಬರಲಿರುವ ಬ್ಯಾಟರಿಯನ್ನು ಅಭಿವೃದ್ಧಿ ಪಡಿಸಿರುವುದಾಗಿ ಇತ್ತೀಚೆಗಷ್ಟೇ ಟೆಸ್ಲಾ ತಿಳಿಸಿತ್ತು. ಎಲೆಕ್ಟ್ರಿಕ್ ಕಾರು ಉತ್ಪಾದನೆ ರಂಗದಲ್ಲಿ ಇದೊಂದು ಕ್ರಾಂತಿಕಾರಕ ಸಂಶೋಧನೆ ಎಂದೇ ಇದನ್ನು ಬಿಂಬಿಸಲಾಗಿತ್ತು.