

Actress Sunaina: ನಟ ಪ್ರಜ್ವಲ್ ದೇವರಾಜ್ ಅಭಿನಯದ ಗಂಗೆ ಬಾರೆ ತುಂಗೆ ಬಾರೆ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಸುನೈನಾ, ಚಂದನವನದಲ್ಲಿ ಕೇವಲ ಒಂದೇ ಸಿನಿಮಾಗೆ ಸೀಮಿತವಾದರು. ಇದಾದ ಬಳಿಕ ತಮಿಳು, ತೆಲುಗು ಚಿತ್ರರಂಗದಲ್ಲಿ ಸುನೈನಾ ಗುರುತಿಸಿಕೊಂಡರು. ಕೆಲ ತಿಂಗಳ ಹಿಂದಷ್ಟೇ ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ಖಚಿತಪಡಿಸುವ ಮೂಲಕ ಸುನೈನಾ ಭಾರಿ ಸುದ್ದಿಯಾಗಿದ್ದರು. ಆದರೆ, ಯಾರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ನೀಡಿರಲಿಲ್ಲ.
ಸುನೈನಾ ಅವರು ದುಬೈ ಮೂಲದ ಖ್ಯಾತ ಯೂಟ್ಯೂಬರ್ ಖಲೀದ್ ಅಲ್ ಅಮೇರಿ ಅವರನ್ನು ಮದುವೆಯಾಗಲಿದ್ದಾರೆ ಎಂದು ಸುದ್ದಿ ಹಲವು ವೆಬ್ಸೈಟ್ಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಕಾಲಿವುಡ್ ಗಲ್ಲಿಯಲ್ಲೂ ಭಾರಿ ಚರ್ಚೆಯಾಯಿತು.
ಕಳೆದ ತಿಂಗಳು ಜೂನ್ 5ರಂದು ಸುನೈನಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೈ ಕೈ ಹಿಡಿದಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಆದರೆ, ಯಾವುದೇ ಅಡಿಬರಹವನ್ನು ನೀಡಿರಲಿಲ್ಲ. ಸುನೈನಾ ಅವರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ, ಕೈ ಹಿಡಿದಿರುವ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಿರುವಾಗ ಜೂನ್ 26ರಂದು ಯೂಟ್ಯೂಬರ್ ಖಲೀದ್ ವಜ್ರದ ಉಂಗುರವನ್ನು ಧರಿಸಿರುವ ಹುಡುಗಿಯ ಕೈಯನ್ನು ಹಿಡಿದಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಇಬ್ಬರ ನಿಶ್ಚಿತಾರ್ಥದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಸದ್ಯದಲ್ಲೇ ಸುನೈನಾ ಮತ್ತು ಖಾಲಿದ್ ಮದುವೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿತು.
ತಾಜಾ ಸಂಗತಿ ಏನೆಂದರೆ, ಸುನೈನಾ ಮತ್ತು ಖಲೀದ್ ನಡುವೆ ಪ್ರೇಮಾಂಕುರವಾಗಿರುವುದು ಖಚಿತವಾಗಿದೆ. ಏಕೆಂದರೆ, ನಿನ್ನೆಯಷ್ಟೇ ಸುನೈನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಕೆಲ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಯಾವುದೋ ರೆಸ್ಟೋರೆಂಟ್ನಲ್ಲಿ ಡಿನ್ನರ್ ಮಾಡಿರುವುದಕ್ಕೆ ಸಂಬಂಧಿಸಿದ ಫೋಟೋಗಳಾಗಿವೆ. ಒಂದು ಫೋಟೋದಲ್ಲಿ ವ್ಯಕ್ತಿಯೊಬ್ಬರ ಕೈಹಿಡಿದಿದ್ದಾರೆ. ಆದರೆ, ಮುಖದ ಗುರುತು ಬಹಿರಂಗಪಡಿಸಿಲ್ಲ. ಕೈಹಿಡಿದಿರುವ ವ್ಯಕ್ತಿ ಖಲೀದ್ ಎಂದು ಹೇಳಲಾಗುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಖಲೀದ್ ಕೂಡ ಸುನೈನಾ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಹೀಗಾಗಿ ಇಬ್ಬರ ನಡುವೆ ಪ್ರೀತಿ ಅರಳಿರುವುದು ನಿಜವೆಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಈಗಾಗಲೇ ಇಬ್ಬರು ರಹಸ್ಯವಾಗಿ ಮದುವೆ ಆಗಿದ್ದಾರೆ ಅಂತಾನೂ ಮಾಡಿಕೊಳ್ಳುತ್ತಿದ್ದಾರೆ.
ಗಮನಾರ್ಹ ಸಂಗತಿ ಏನೆಂದರೆ, ಖಾಲಿದ್ ಅವರ ಮಾಜಿ ಪತ್ನಿ ಸಲಾಂ ಮೊಹಮದ್ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ನಲ್ಲಿ ಕಳೆದ ಫೆಬ್ರವರಿ 14ರಂದು ತಮ್ಮ ವಿಚ್ಛೇದನವನ್ನು ಅಂತಿಮಗೊಳಿಸಿರುವುದಾಗಿ ಬಹಿರಂಗಪಡಿಸಿದರು. ಖಲೀದ್ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪದವೀಧರ. ಖಲೀದ್ ಮತ್ತು ಸಲಾಂ ಒಂದು ಕಾಲದಲ್ಲಿ ಮಧ್ಯಪ್ರಾಚ್ಯದಲ್ಲಿ ಸ್ಟಾರ್ ಜೋಡಿಯಾಗಿ ಹೆಸರು ಮಾಡಿದರು. ಆದರೆ, ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿ, ಬೇರೆಯಾಗಿದ್ದಾರೆ.
ಇನ್ನು ಹೈದರಾಬಾದ್ ಮೂಲದವರಾದ ಸುನೈನಾಗೆ 2008 ರಿಂದ ತಮಿಳು ಚಿತ್ರರಂಗದಲ್ಲಿ ಸರಣಿ ಅವಕಾಶಗಳು ಬಂದವು. ಇತ್ತೀಚೆಗೆ ಅಮೆಜಾನ್‌ನಲ್ಲಿ ಪ್ರೈಮ್‌ನಲ್ಲಿ ಬಂದ 'ಇನ್‌ಸ್ಪೆಕ್ಟರ್ ರಿಷಿ' ವೆಬ್ ಸರಣಿಯಲ್ಲಿ ಕೊನೆಯದಾಗಿ ನಟಿಸಿದರು. (ಏಜೆನ್ಸೀಸ್)