21 ವರ್ಷ, ದುರಂತ ಅಂತ್ಯವಲ್ಲ! ನಟಿ ಸೌಂದರ್ಯ ಅಪಘಾತದಲ್ಲಿ ಸಾಯಲಿಲ್ಲ, ಅದು ಕೊಲೆ | Actress Soundarya

ವಿಜಯವಾಣಿ - 2025-03-11T184755.474
Published on

Actress Soundarya: ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಮಿಂಚಿ, 31ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ದಕ್ಷಿಣ ಭಾರತದ ಸ್ಟಾರ್​ ನಟಿ ಸೌಂದರ್ಯ, ಅಂದು ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಸಂಗತಿ ಎಲ್ಲರಿಗೂ ತಿಳಿದೇ ಇದೆ. 21 ವರ್ಷಗಳ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ ನಟಿಯ ಸಾವು ಅಸಲಿಗೆ ಸಾವಲ್ಲ. ಅದೊಂದು ಕೊಲೆ ಎಂಬ ದೊಡ್ಡ ಆರೋಪವೊಂದು ಸದ್ಯ ಭಾರೀ ಸಂಚಲನ ಹುಟ್ಟುಹಾಕಿದೆ.

ಕನ್ನಡದಲ್ಲಿ 'ಸಿಪಾಯಿ', 'ಆಪ್ತಮಿತ್ರ' ಚಿತ್ರಗಳಲ್ಲಿ ನಟಿಸಿ, ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಸೌಂದರ್ಯ, ತಮ್ಮ ಹೆಸರಿಗೆ ತಕ್ಕಂತೆ ಬದುಕಿ ಬಾಳಿದವರು. ಚಿತ್ರೋದ್ಯಮದ ಉತ್ತುಂಗದಲ್ಲಿದ್ದ ನಟಿ 2004ರಲ್ಲಿ ಚುನಾವಣಾ ಪ್ರಚಾರಕ್ಕೆಂದು ಪ್ರಯಾಣಿಸುವಾಗ ಹೆಲಿಕಾಪ್ಟರ್​ ಪತನಗೊಂಡು ದುರಂತ ಅಂತ್ಯ ಕಂಡರು. ಈ ವೇಳೆ ನಟಿಯ ಜತೆ ಪ್ರಯಾಣಿಸುತ್ತಿದ್ದ ಆಕೆಯ ಸಹೋದರ ಕೂಡ ದುರಂತದಲ್ಲಿ ಸಾವಿಗೀಡಾದರು.

ಅಚ್ಚರಿಗೆ ದೂಡಿದ ದೂರು

ನಟಿ ಅಪಘಾತದಲ್ಲಿ ಸಾವಿಗೀಡಾದರು ಎಂಬ ಸುದ್ದಿ ಅಂದು ಎಲ್ಲೆಡೆ ಭಾರೀ ಸುದ್ದಿಯಾಗಿತ್ತು. ಆದರೆ, ಇದೀಗ ಅಚ್ಚರಿ ವರದಿಯೊಂದು ಹೊರಬಿದ್ದಿದ್ದು, ನಟಿ ಅಪಘಾತದಲ್ಲಿ ಸಾವನ್ನಪ್ಪಲಿಲ್ಲ. ಬದಲಿಗೆ ಅದೊಂದು ಉದ್ದೇಶಪೂರ್ವಕ ಕೊಲೆ ಎಂಬ ಆರೋಪ ಸದ್ಯ ಟಾಲಿವುಡ್​ ಅಂಗಳದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ನಟಿಯ ಅಭಿಮಾನಿಗಳು ಮತ್ತು ಚಿತ್ರಪ್ರೇಮಿಗಳು ಅಕ್ಷರಶಃ ಅಚ್ಚರಿಗೆ ಒಳಗಾಗಿದ್ದಾರೆ. ಈ ವಿಚಾರದಲ್ಲಿ ಟಾಲಿವುಡ್‌ ಹಿರಿಯ ನಟ ಮೋಹನ್ ಬಾಬು ಹೆಸರು ಕೇಳಿಬಂದಿರುವುದು ಮತ್ತೊಂದು ಅಚ್ಚರಿ.

ಮೋಹನ್ ಬಾಬು ಕೈವಾಡವಿದೆ

ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಸಮಸ್ಯೆಗಳ ಎದುರಿಸುತ್ತಿರುವ ತೆಲುಗು ಚಿತ್ರರಂಗದ ವಿಲನ್​ ಮೋಹನ್​ ಬಾಬು, ಇದೀಗ ಹೊಸ ಸಮಸ್ಯೆಯನ್ನು ಹೊತ್ತಿದ್ದಾರೆ. ‘ಸೂರ್ಯವಂಶಂ’ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಎದುರು ‘ರಾಧಾ’ ಪಾತ್ರಕ್ಕೆ ಅಪಾರ ಖ್ಯಾತಿ ಗಳಿಸಿದ್ದ ನಟಿ ಸೌಂದರ್ಯ ಅವರ ಸಾವಿನಲ್ಲಿ ಮೋಹನ್ ಬಾಬು ಕೈವಾಡವಿದೆ ಎಂದು ಆಂಧ್ರಪ್ರದೇಶದ ಖಮ್ಮಮ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ನಟನ ವಿರುದ್ಧ ದೂರು ದಾಖಲಿಸಿದ್ದಾರೆ.

ಆಸ್ತಿಗಾಗಿ ಸಂಚು

ಏಪ್ರಿಲ್ 17, 2004ರಂದು ಖಾಸಗಿ ಹೆಲಿಕಾಪ್ಟರ್​ ಅಪಘಾತದಲ್ಲಿ ದುರಂತ ಅಂತ್ಯ ಕಂಡ ಸೌಂದರ್ಯ ಅವರಿಗೆ ಆಗ 31 ವರ್ಷ ವಯಸ್ಸು. ಅಂದಿನ ಮಾಧ್ಯಮ ವರದಿಗಳ ಪ್ರಕಾರ, ಅಪಘಾತದ ಸಮಯದಲ್ಲಿ ನಟಿ ಭಾರತೀಯ ಜನತಾ ಪಕ್ಷ ಮತ್ತು ತೆಲುಗು ದೇಶಂ ಪಕ್ಷದ ಕರೀಂನಗರದಲ್ಲಿ ನಡೆಯುತ್ತಿದ್ದ ರಾಜಕೀಯ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ, ಸಾವಿಗೀಡಾದರು. ತಮ್ಮ ಸಹೋದರನ ಜತೆಗೆ ಸುಟ್ಟು ಕರಕಲಾದ ಸೌಂದರ್ಯ ದೇಹವನ್ನು ಪಡೆಯಲು ಅವರ ಕುಟುಂಬಕ್ಕೆ ಸಾಧ್ಯವಾಗಲಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ.

ದೂರಿನಲ್ಲಿ ಉಲ್ಲೇಖ

ಪ್ರಸ್ತುತ ದಾಖಲಾಗಿರುವ ದೂರಿನಲ್ಲಿ ಸೌಂದರ್ಯ ಅವರ ಸಾವು ಅಪಘಾತವಲ್ಲ. ಬದಲಿಗೆ ಕೊಲೆ ಎಂದು ಹೇಳಲಾಗಿದ್ದು, ಇದು ಮೋಹನ್ ಬಾಬು ಅವರೊಂದಿಗಿನ ಆಸ್ತಿ ವಿವಾದಕ್ಕೆ ನಡೆದ ಹತ್ಯೆ ಎಂದು ಆರೋಪಿಸಲಾಗಿದೆ. ಶಂಶಾಬಾದ್‌ನ ಜಲಪಲ್ಲಿ ಗ್ರಾಮದಲ್ಲಿ ಆರು ಎಕರೆ ಭೂಮಿಯನ್ನು ಮೋಹನ್ ಬಾಬುಗೆ ಕೊಡಲು ಸೌಂದರ್ಯ ಮತ್ತು ಅವರ ಸಹೋದರ ಅಮರನಾಥ್ ನಿರಾಕರಿಸಿದ್ದರು. ಇದು ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರುದಾರರನ್ನು ಚಿಟ್ಟಿಮಲ್ಲು ಎಂದು ಗುರುತಿಸಲಾಗಿದ್ದು, ಖಮ್ಮಮ್ ಎಸಿಪಿ ಮತ್ತು ಖಮ್ಮಮ್ ಜಿಲ್ಲಾ ಅಧಿಕಾರಿ ಇಬ್ಬರಿಗೂ ತಮ್ಮ ದೂರನ್ನು ಸಲ್ಲಿಸಿದ್ದಾರೆ. ಅನಾಥಾಶ್ರಮಗಳು, ಮಿಲಿಟರಿ ಕುಟುಂಬಗಳು, ಪೊಲೀಸ್ ಪಡೆ ಅಥವಾ ಮಾಧ್ಯಮ ಸಿಬ್ಬಂದಿಯಂತಹ ಸಂಸ್ಥೆಗಳಿಗೆ ಪ್ರಯೋಜನವಾಗುವಂತೆ ಆ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬೇಕೆಂದು ವಿಶೇಷವಾಗಿ ಮನವಿ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net