ನವದೆಹಲಿ: ರಾಷ್ಟ್ರರಾಜಧಾನಿ ಚುನಾವಣೆಯಲ್ಲಿನ ಸೋಲಿನ ಬಳಿಕ ಅರವಿಂದ್ ಕೇಜ್ರಿವಾಲ್(Arvind Kejriwal) ಅವರ ತೊಂದರೆಗಳು ನಿರಂತರವಾಗಿ ಹೆಚ್ಚುತ್ತಿವೆ. ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಿಂದ ಕೇಜ್ರಿವಾಲ್ ಅವರಿಗೆ ದೊಡ್ಡ ಹೊಡೆತ ಬಿದ್ದಿದೆ. ಕೇಜ್ರಿವಾಲ್ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸುವ ಬೇಡಿಕೆಯನ್ನು ರೋಸ್ ಅವೆನ್ಯೂ ನ್ಯಾಯಾಲಯ ಒಪ್ಪಿಕೊಂಡಿದೆ.
ಇದನ್ನು ಓದಿ: ಬೇಹುಗಾರಿಕೆ ಆರೋಪದ ಮೇಲೆ 2 ಬ್ರಿಟಿಷ್ ರಾಜತಾಂತ್ರಿಕರನ್ನು ಹೊರಹಾಕಿದ ರಷ್ಯಾ | Russia
2019ರಲ್ಲಿ ದ್ವಾರಕಾದಲ್ಲಿ ಬೃಹತ್ ಪಾರ್ಟಿ ಹೋರ್ಡಿಂಗ್‌ಗಳನ್ನು ಹಾಕಲು ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಪಕ್ಷದ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಮಂಗಳವಾರ(ಮಾರ್ಚ್ 11) ಅಧಿಕಾರಿಗಳಿಗೆ ಆದೇಶಿಸಿದೆ.
ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನೇಹಾ ಮಿತ್ತಲ್ ಅವರು ಪ್ರಕರಣದ ವಿಚಾರಣೆ ನಡೆಸಿದರು. ಸೆಪ್ಟೆಂಬರ್ 2022ರಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೂರನ್ನು ವಜಾಗೊಳಿಸಿದರು. ಆದರೆ ಸೆಷನ್ಸ್ ನ್ಯಾಯಾಲಯವು ಕೆಳನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ, ಮರುಪರಿಶೀಲನೆಗಾಗಿ ಮ್ಯಾಜಿಸ್ಟ್ರೇಟ್‌ಗೆ ಹಿಂತಿರುಗಿಸಿತು. ಇಂದು ದೂರನ್ನು ಸ್ವೀಕರಿಸಿದ ನ್ಯಾಯಾಲಯವು ಮಾರ್ಚ್ 18ರೊಳಗೆ ಆದೇಶದ ಅನುಷ್ಠಾನದ ಕುರಿತು ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ.
ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಪ್ರಸ್ತುತ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇದಲ್ಲದೆ ಇತ್ತೀಚೆಗೆ ಅವರು ನವದೆಹಲಿ ವಿಧಾನಸಭಾ ಸ್ಥಾನದಿಂದ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಚುನಾವಣೆಯಲ್ಲಿ ಸೋತರು. ಈ ಹೊಸ ಪ್ರಕರಣವು ಅವರಿಗೆ ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸಿದೆ. ಇದರಿಂದಾಗಿ ಅವರ ರಾಜಕೀಯ ಇಮೇಜ್ ಬಗ್ಗೆ ಪ್ರಶ್ನೆಗಳು ಎದ್ದಿವೆ.(ಏಜೆನ್ಸೀಸ್)