ವಿಜಯವಾಣಿ ಸುದ್ದಿಜಾಲ ಕೋಲಾರ
ಪ್ರಪಂಚ ಪ್ರಸಿದ್ದ ಮಾವಿನನಗರಿ ಎಂಬ ಹೆಗ್ಗಳಿಕೆ ಪಡೆದಿರುವ ಶ್ರೀನಿವಾಸಪುರ ತಾಲ್ಲೂಕಿಗೆ ಹೈಟೆಕ್ ಮಾರುಕಟ್ಟೆ ಮತ್ತು ತಾಲ್ಲೂಕಿನಲ್ಲಿ ಸರ್ಕಾರಿ ಸ್ವಾಮ್ಯದ ಮಾವು ತಿರುಳು ಘಟಕವನ್ನು ಸ್ಥಾಪಿಸಲು ಬಜೆಟ್ ನಲ್ಲಿ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆ, ಆದರೆ ಮುಖ್ಯಮಂತ್ರಿಗಳ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿಯೊಂದಿಗೆ ಮಾತನಾಡಿದ ಶಾಸಕರು ಆಂಧ್ರದ ಗಡಿ ಭಾಗದಲ್ಲಿರುವ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈತರು ಹತ್ತಾರು ವಿವಿಧ ತಳಿಯ ಮಾವು ಬೆಳೆದು ಪ್ರಪಂಚದಲ್ಲಿಯೇ ಪ್ರಸಿದ್ದಿ ಪಡೆದಿದೆ. ಆದರೆ ಪ್ರಪಂಚ ಪ್ರಸಿದ್ದ ಮಾವಿನ ನಗರಿಯಲ್ಲಿಯೇ ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆಯಿಲ್ಲ, ಮಾವಿನ ಸುಗ್ಗಿ ಸಮಯದಲ್ಲಿ ದೇಶದ ನಾನಾ ರಾಜ್ಯಗಳಿಂದ ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ತಾಲ್ಲೂಕಿಗೆ ಬರುತ್ತಾರೆ. ಅವರು ಮಾರುಕಟ್ಟೆಯಲ್ಲಿ ಉಳಿದುಕೊಳ್ಳಲು ಮೂಲಭೂತ ಸೌಲಭ್ಯಗಳಿಲ್ಲ. ಈ ಹಿನ್ನಲೆಯಲ್ಲಿ ತಾಲ್ಲೂಕಿಗೆ ಹೈಟೆಕ್ ಮಾರುಕಟ್ಟೆ ಕಲ್ಪಿಸಿಕೊಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿತ್ತು.
ಮಾವಿನ ಸುಗ್ಗಿ ಪ್ರಾರಂಭವಾಗುತ್ತಿದ್ದAತೆ ನಾನಾ ಕಾರಣಗಳಿಂದ ಮಾವಿನ ಬೆಲೆ ಕುಸಿಯತೊಡಗುತ್ತದೆ. ಆದ್ದರಿಂದ ತಾಲ್ಲೂಕಿನಲ್ಲಿಯೇ ಸರ್ಕಾರಿ ಸ್ವಾಮ್ಯದ ಮಾವು ತಿರುಳು ತೆಗೆಯುವ ಘಟಕವನ್ನು ಸ್ಥಾಪಿಸಿದರೆ ರೈತರು ತಾವು ಬೆಳೆದ ಮಾವನ್ನು ನೇರವಾಗಿ ಪ್ಯಾಕ್ಟರಿಯಲ್ಲಿ ಮಾರಾಟ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಸರ್ಕಾರಿ ಸ್ವಾಮ್ಯದ ಮಾವು ತಿರುಳು ಘಟಕವನ್ನು ಸ್ಥಾಪಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಬಜೆಟ್ ನಲ್ಲಿ ಹೈಟೆಕ್ ಮಾರುಕಟ್ಟೆ ಮತ್ತು ಮಾವು ತಿರುಳು ಘಟಕವನ್ನು ಶ್ರೀನಿವಾಸಪುರ ತಾಲ್ಲೂಕಿಗೆ ನೀಡದಿರುವ ಬಗ್ಗೆ ಅಸಮಾಧಾನವಿದೆ ಅದಕ್ಕಾಗಿ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದ್ದಾರೆ.
ಚಿತ್ರ ೧೧ ಕೆ.ಎಲ್.ಆರ್. ೦೪ : ಜಿ.ಕೆ.ವೆಂಕಟಶಿವಾರೆಡ್ಡಿ ಭಾವಚಿತ್ರ