ಬೆಂಗಳೂರು: ‘ಬಿಗ್ ಬಾಸ್’ ಮನೆಗೆ ಹೋಗುವುದಕ್ಕಿಂತ ಮುಂಚೆಯೇ, ‘ಅಂಬುಜಾ’ ಎಂಬ ಚಿತ್ರದಲ್ಲಿ ಶುಭಾ ಪೂಂಜ ನಟಿಸುತ್ತಿರುವ ಸುದ್ದಿಯಾಗಿತ್ತು. ಆದರೆ, ಚಿತ್ರೀಕರಣ ಮಾತ್ರ ಶುರುವಾಗಿರಲಿಲ್ಲ. ಅಕ್ಟೋಬರ್ನಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದ್ದು, ಇಂದು ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ‘ಅಂಬುಜಾ’ ಮಹಿಳಾ ಪ್ರಧಾನ ಚಿತ್ರವಷ್ಟೇ ಅಲ್ಲ, ನೈಜ ಘಟನೆಯಾಧಾರಿತ ಚಿತ್ರವೂ ಹೌದು. ಈ ಹಿಂದೆ ‘ಕೆಲವು ದಿನಗಳ ನಂತರ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಿ ಹನುಮಂತರಾಜು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇದೊಂದು ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಎನ್ನುವ ಅವರು, ಜ್ಞಾನ, ವಿಜ್ಞಾನ, ಅಜ್ಞಾನಗಳ ಒಟ್ಟು ಚಿತ್ರಣವೇ ‘ಅಂಬುಜ’ ಎನ್ನುತ್ತಾರೆ. ಶುಭಾ ಪೂಂಜ ಇಲ್ಲಿ ಕ್ರೖೆಮ್ ರಿಪೋರ್ಟರ್ ಆಗಿ ಅಭಿನಯಿಸುತ್ತಿದ್ದು, ಲಂಬಾಣಿ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಲಂಬಾಣಿ ವಸ್ತ್ರ ಹಾಗೂ ಆಭರಣಗಳನ್ನು ಗದಗ ಜಿಲ್ಲೆಯ ಲಂಬಾಣಿ ತಾಂಡಾದಲ್ಲಿ ಸುಮಾರು 4 ತಿಂಗಳ ಕಾಲ ತಯಾರು ಮಾಡಲಾಗಿದ್ದು, ಇದರ ತೂಕೆ 20 ಕೆಜಿ ಎಂದು ನಿರ್ದೇಶಕರು ಹೇಳುತ್ತಾರೆ. ಶುಭಾ ಜತೆಗೆ ಪದ್ಮಜಾ ರಾವ್, ‘ಕಾಮಿಡಿ ಕಿಲಾಡಿಗಳು’ ಗೋವಿಂದೇ ಗೌಡ ಮುಂತಾದವರು ನಟಿಸುತ್ತಿದ್ದಾರೆ. ಕಾಶೀನಾಥ್ ಮಡಿವಾಳರ್ ಕಥೆ ಬರೆದು ನಿರ್ವಿುಸುತ್ತಿದ್ದಾರೆ.