

ಗ್ಲಾಮರಸ್ ಪಾತ್ರಗಳಲ್ಲಿ, ಸ್ಪೆಷಲ್ ಸಾಂಗ್ಗಳಲ್ಲಿ ಮಿಂಚುತ್ತಿದ್ದ ಬಾಲಿವುಡ್ ಚೆಲುವೆ ಶಿಲ್ಪಾ ಶೆಟ್ಟಿ ಈಗ 46ರ ಹರೆಯದಲ್ಲಿ ಸೂಪರ್ ಹೀರೋ ಆಗಿದ್ದಾರೆ. ಹೌದು, ಸಬ್ಬಿರ್ ಖಾನ್ ನಿರ್ದೇಶನದ ಆಕ್ಷನ್ ಕಾಮಿಡಿ ‘ನಿಕಮ್ಮಾ’ ಚಿತ್ರದಲ್ಲಿ ಅಂತಹ ಒಂದು ವಿಶೇಷ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಈ ಚಿತ್ರಕ್ಕೆ ನಟಿ ಭಾಗ್ಯಶ್ರೀ ಪುತ್ರ ಅಭಿಮನ್ಯು ದಸಾನಿ ನಾಯಕನಾಗಿದ್ದು, ಅವರಿಗೆ ಶೆರ್ಲೀ ಸೇಟಿಯಾ ಜೋಡಿಯಾಗಿದ್ದಾರೆ.
2017ರಲ್ಲಿ ಬಿಡುಗಡೆಯಾದ ತೆಲುಗಿನ ‘ಮಿಡಲ್ ಕ್ಲಾಸ್ ಅಬ್ಬಾಯಿ’ ಚಿತ್ರದ ರಿಮೇಕ್ ಆಗಿರುವ ‘ನಿಕಮ್ಮಾ’ದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಸೂಪರ್ವ್ಯಾನ್ನಂತೆ ವಿಶೇಷ ಕಾಸ್ಟ್ಯೂಮ್ಲ್ಲಿ ಸಿಡಿಲ ನಡುವೆ ಖಡ್ಗ ಹಿಡಿದು ನಿಂತಿರುವ ಶಿಲ್ಪಾ ಶೆಟ್ಟಿ ಪಾತ್ರ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಅಂದಹಾಗೆ, 2007ರಲ್ಲಿ ‘ಅಪ್ನೇ’ ಚಿತ್ರದಲ್ಲಿ ಕಾಣಿಸಿಕೊಂಡ ನಂತರ, ಶಿಲ್ಪಾ ಶೆಟ್ಟಿ ಈ 15 ವರ್ಷಗಳಲ್ಲಿ ಕೇವಲ ಮೂರು ಚಿತ್ರಗಳಲ್ಲಿ ಸ್ಪೆಷಲ್ ಹಾಡುಗಳಲ್ಲಷ್ಟೇ ಕುಣಿದು ಮಿಂಚು ಹರಿಸಿದ್ದರು.
ಕಳೆದ ವರ್ಷ ಬಿಡುಗಡೆಯಾದ ‘ಹಂಗಾಮಾ 2’ ಚಿತ್ರದ ಮೂಲಕ ಮತ್ತೆ ನಾಯಕಿಯಾಗಿದ್ದರು. ಆ ಬಳಿಕ ಪ್ರಮುಖ ಪಾತ್ರಗಳಲ್ಲೇ ಮುಂದುವರಿದಿರುವ ಶಿಲ್ಪಾ, ಈಗ ‘ನಿಕಮ್ಮಾ’ ಚಿತ್ರದಲ್ಲಿ ನಟಿಸಿದ್ದಾರೆ. ಜತೆಗೆ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಲ್ಲೂ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವ ಶಿಲ್ಪಾ, ‘ನಿಕಮ್ಮಾ’ ಅಲ್ಲದೆ ಮತ್ತೊಂದು ಚಿತ್ರಕ್ಕೂ ಸಹಿ ಹಾಕಿದ್ದಾರೆ.