

‘ನಾಯಕಿಯಾಗಿ ಕಾಣಿಸಿಕೊಂಡಿದ್ದಾಗಿದೆ. ಇನ್ನೇನಿದ್ದರೂ ಹೊಸ ಪ್ರಯತ್ನಗಳಿಗೆ ಧುಮುಕುವುದಷ್ಟೇ ...’ ಹೀಗೆ ಖುಷಿಯಿಂದ ಹೇಳಿಕೊಂಡರು ಶಾನ್ವಿ ಶ್ರೀವಾತ್ಸವ್. ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗಿದ್ದ ಶಾನ್ವಿ, ಇದೇ ಮೊದಲ ಬಾರಿಗೆ ‘ಬ್ಯಾಂಗ್’ ಎಂಬ ಚಿತ್ರದಲ್ಲಿ ಹಿಂದೆಂದೂ ಮಾಡದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗಾಗಿಯೇ ಸಹಜ ಖುಷಿಯಲ್ಲಿದ್ದಾರೆ ಶಾನ್ವಿ. ಗಣೇಶ್ ಪರಶುರಾಮ್ ನಿರ್ದೇಶಿಸಿರುವ ‘ಬ್ಯಾಂಗ್’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸೋಮವಾರ ಸಂಜೆ ಟೀಸರ್ ಬಿಡುಗಡೆಯಾಗಿದೆ. ಇದೊಂದು ಆಕ್ಷನ್- ಥ್ರಿಲ್ಲರ್ ಚಿತ್ರವಾಗಿದ್ದು, ‘ಒಂದು ವರ್ಗಕ್ಕೆ ಸೀಮಿತವಾಗದೆ, ಎಲ್ಲರಿಗೂ ಹಿಡಿಸುವ ಕಥೆ ಇದರಲ್ಲಿದೆ’ ಎನ್ನುತ್ತಾರೆ ಪರಶುರಾಮ್. ‘ಕೇವಲ 48 ಗಂಟೆಗಳಲ್ಲಿ ನಡೆಯುವ ಕಥೆಯನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಇಲ್ಲಾಗಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಫೆಬ್ರವರಿಯಲ್ಲಿ ಸಿನಿಮಾ ತೆರೆಗೆ ಬರಲಿದೆ’ ಎಂಬ ಮಾಹಿತಿಯನ್ನು ಅವರು ನೀಡುತ್ತಾರೆ.
ಪಾತ್ರದ ಬಗ್ಗೆ ಅಷ್ಟೇ ಥ್ರಿಲ್ ಆಗಿರುವ ಶಾನ್ವಿ, ‘ಒಬ್ಬ ನಟಿಯಾಗಿ ನನ್ನೊಳಗಿನ ನಟಿಯನ್ನು ನಾನು ಮೊದಲು ತೃಪ್ತಿ ಪಡಿಸಬೇಕು. ಅಂಥದ್ದೊಂದು ಪಾತ್ರ ‘ಬ್ಯಾಂಗ್’ನಲ್ಲಿ ಸಿಕ್ಕಿದೆ. ಇಲ್ಲಿಯವರೆಗೂ ನಾಯಕಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಇಂಥ ಪಾತ್ರ ಮಾಡಿರಲಿಲ್ಲ. ಆಯ್ಕೆ ಮಾಡಿದ ಮೇಲೆ ನನ್ನ ನಿರ್ಧಾರ ಸರಿ ಎನಿಸಿತು. ಒಂದೊಳ್ಳೆ ಪ್ರಯತ್ನ ನಮ್ಮ ತಂಡದಿಂದಾಗಿದೆ’ ಎಂದರು. ಈ ಚಿತ್ರದಲ್ಲಿ ರಘು ದೀಕ್ಷಿತ್, ರಿತ್ವಿಕ್ ಮುರಳಿಧರ್, ಸುನೀಲ್, ನಾಟ್ಯರಂಗ ಭೂಷಣ್, ಶ್ರಾವ್ಯಾ ಮುಂತಾದವರು ನಟಿಸಿದ್ದಾರೆ. ಯುಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಪೂಜಾ ವಸಂತ್ ಕುಮಾರ್ ಚಿತ್ರ ನಿರ್ವಿುಸಿದ್ದಾರೆ. ಉದಯ್ಲೀಲಾ ಛಾಯಾಗ್ರಹಣ, ರಿತ್ವಿಕ್ ಸಂಗೀತ ಚಿತ್ರಕ್ಕಿದೆ.