

ಚಿತ್ರರಂಗದಲ್ಲಿ ಹಲವು ನಟ, ನಟಿಯರು ಒಂದು ಹಂತದಲ್ಲಿ ಟಾಪ್‌ನಲ್ಲಿದ್ದರೂ ವೈಯಕ್ತಿಕ ಜೀವನದಲ್ಲಿ ಕೆಲವೊಮ್ಮೆ ಕಷ್ಟಗಳನ್ನು ಎದುರಿಸುತ್ತಾರೆ. ವೈಯಕ್ತಿಕ ಜೀವನದ ಸಮಸ್ಯೆಗಳು, ಅನಾರೋಗ್ಯ ಹೀಗೆ ಹಲವು ಕಾರಣಗಳು ಅವರ ವೃತ್ತಿ ಮೇಲೂ ಪರಿಣಾಮ ಬೀರುತ್ತವೆ. ಅದೇ ರೀತಿ ತೆಲುಗು ನಟಿ ಸಮಂತಾ ಕೂಡ ಚಿತ್ರರಂಗದಲ್ಲಿ ಮಿಂಚುತ್ತಿದ್ದರೂ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ನೋವು, ಕಷ್ಟಗಳನ್ನು ಕೂಡ ಮುಕ್ತವಾಗಿ ಹಂಚಿಕೊಳ್ಳುವ ಸಮಂತಾ ಅವುಗಳನ್ನು ಹೇಗೆ ಮೀರಿದ್ದು ಎನ್ನುವುದರ ಬಗ್ಗೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಬಂಜಾರ ಸಂಸ್ಕೃತಿ ಕುರಿತ ಭಾಯ್ ಚಿತ್ರದಲ್ಲಿ ಯುವ ಮತ್ತು ಪೂಜಾ
‘ನನ್ನ ಮದುವೆ ಮುರಿದು ಬಿತ್ತು. ಅದರ ಜತೆಗೆ ಅನಾರೋಗ್ಯ ಸಮಸ್ಯೆ ಕಾಡಿತು. ಅದು ನನ್ನ ಕೆಲಸಕ್ಕೆ ಅಡ್ಡಿಯಾಯಿತು. ಒಂದಾದಮೇಲೊಂದರಂತೆ ಸಮಸ್ಯೆಗಳು ಕಾಡುತ್ತಿದ್ದವು. ಆದರೆ, ಕೆಲವರು ನನಗಿಂತ ಹೆಚ್ಚು ಕಷ್ಟಗಳನ್ನು ಜೀವನದಲ್ಲಿ ನೋಡಿದ್ದಾರೆ ಎನ್ನುವುದು ಗೊತ್ತು. ನನಗಿಂತ ಹೆಚ್ಚು ನೋವು ಅನುಭವಿಸಿದ ಹಲವಾರು ನಟ, ನಟಿಯರ ಬಗ್ಗೆ ಲೇಖನಗಳನ್ನು ಓದುತ್ತಿದ್ದೆ. ಅನಾರೋಗ್ಯ, ಸಮಾಜದ ಟೀಕೆಗಳನ್ನು ಎದುರಿಸಿ ಹೇಗೆ ಕಂಬ್ಯಾಕ್ ಮಾಡಿದರು ಎನ್ನುವ ಕಥೆಗಳನ್ನು ಓದುವಾಗ ನನ್ನಲ್ಲಿ ಸ್ಫೂರ್ತಿ ತುಂಬುತ್ತಿತ್ತು. ಅವರಿಂದ ಸಾಧ್ಯ ಎಂದಾಗ ನನ್ನಿಂದಲೂ ಸಾಧ್ಯ ಎಂದುಕೊಂಡೆ. ಈ ದೇಶದ ಜನರು ಪ್ರೀತಿಸುವ ಸ್ಟಾರ್ ಆಗುವುದು ಪುಣ್ಯ. ಹೀಗಾಗಿ ನಾನು ಕೂಡ ಪ್ರಾಮಾಣಿಕವಾಗಿ ನನ್ನ ಜೀವನದ ಸೋಲು, ಗೆಲುವಿನ ಕಥೆಯನ್ನು ಮುಕ್ತವಾಗಿ ಹಂಚಿಕೊಳ್ಳುತ್ತೇನೆ. ಜೀವನ ಕೇವಲ ಎಷ್ಟು ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟೆವು ಎಂದಲ್ಲ. ನೋವುಗಳು ಕೂಡ. ನನ್ನ ಕಥೆ ಇನ್ನೊಬ್ಬರಿಗೆ ಸ್ಫೂರ್ತಿಯೂ ಆಗಬಹುದು ಎಂಬ ಕಾರಣಕ್ಕೆ ಎಲ್ಲವನ್ನು ಮುಕ್ತವಾಗಿ ಹಂಚಿಕೊಳ್ಳುತ್ತೇನೆ’ ಎಂದು ಸಮಂತಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ನವರಸನ್ ಸಾರಥ್ಯದ ‘ಎಂಎಂಬಿ ಲೆಗೆಸ್ಸಿ’ಗೆ ಮೊದಲ ವರ್ಷದ ಸಂಭ್ರಮ
ಹೀಗೆ ತಮ್ಮ ಹೋರಾಟಗಳ ಬಗ್ಗೆ ಮುಕ್ತವಾಗಿ ಬರೆದುಕೊಂಡಿರುವ ಸಮಂತಾ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ಹಾಡಿ ಹೊಗಳುವಂತೆ ಮಾಡಿದೆ.