ರಜಿನಿಕಾಂತ್​ 170 ಚಿತ್ರದ ಶೂಟಿಂಗ್​ ವೇಳೆ ನಟಿ ರಿತಿಕಾ ಸಿಂಗ್​ಗೆ ಪೆಟ್ಟು

Ritika Singh (7)
Published on

ವೃತ್ತಿಪರ ಕಿಕ್ ಬಾಕ್ಸರ್ ಆಗಿದ್ದ ತಮಿಳು ನಟಿ ರಿತಿಕಾ ಸಿಂಗ್, ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ. 2016ರಲ್ಲಿ ‘ಇರುದೈ ಸೂಟ್ರು’ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ‘ಗುರು’, ‘ಓ ಮೈ ಕಡವುಳೆ’, ‘ಇನ್‌ಕಾರ್’ ಸೇರಿ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಒಂಬತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ರಿತಿಕಾ, ರಜಿನಿಕಾಂತ್ ನಾಯಕನಾಗಿರುವ 170ನೇ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಆದರೆ, ಚಿತ್ರೀಕರಣದ ವೇಳೆ ಅವರ ಕೈಗೆ ಗಾಜು ತಾಗಿ ಬಲವಾದ ಪೆಟ್ಟು ಬಿದ್ದಿದೆ.

ಈ ಬಗ್ಗೆ ಜಾಲತಾಣದಲ್ಲಿ ರಿತಿಕಾ, ‘ಪಕ್ಕದಲ್ಲಿ ಗಾಜಿದೆ, ಹುಷಾರು ಅಂತ ಹೇಳುತ್ತಿದ್ದರು. ಆದರೂ ನಾನು ಅವರ ಮಾತುಗಳಿಗೆ ಗಮನ ನೀಡದ ಕಾರಣ ಹೀಗೆ ಪೆಟ್ಟಾಯಿತು. ಈಗ ಅಂತಹ ನೋವೇನೂ ಇಲ್ಲ. ಆದರೆ, ಕೆಲವೆಡೆ ಆಳವಾಗಿ ಗಾಯವಾಗಿರುವ ಕಾರಣ ಸಮಯ ಕಳೆದಂತೆ ನೋವು ತೀವ್ರವಾಗಲಿದೆ ಅಂತ ನನಗೆ ಗೊತ್ತು. ಹೀಗಾಗಿ ವೈದ್ಯರ ಬಳಿ ತೆರಳಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

‘ಜೈ ಭೀಮ್’ ಖ್ಯಾತಿಯ ಜ್ಞಾನವೇಲ್ ರಾಜ ಆ್ಯಕ್ಷನ್-ಕಟ್ ಹೇಳುತ್ತಿರುವ ಇನ್ನೂ ಈ ಹೆಸರಿಡದ ಚಿತ್ರದಲ್ಲಿ ರಜಿನಿಕಾಂತ್, ರಿತಿಕಾ ಜತೆ ಅಮಿತಾಭ್ ಬಚ್ಚನ್, ರಾನಾ ದಗ್ಗುಬಾಟಿ, ಫಹದ್ ಫಾಸಿಲ್, ಮಂಜು ವಾರಿಯರ್ ಮತ್ತು ದುಷಾರಾ ವಿಜಯನ್ ಪ್ರಮುಖ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net