‘1980’ ಚಿತ್ರದ ರೆಟ್ರೋ ಲುಕ್​ನಲ್ಲಿ ಪ್ರಿಯಾಂಕಾ ಉಪೇಂದ್ರ

Untitled
Published on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರಿಯಾಂಕಾ ಉಪೇಂದ್ರ ಥ್ರಿಲ್ಲರ್ ಚಿತ್ರಗಳತ್ತ ಹೆಚ್ಚು ವಾಲುತ್ತಿದ್ದಾರೆ. ಸದ್ಯ ಅವರ ಬತ್ತಳಿಕೆಯಲ್ಲಿ ಥ್ರಿಲ್ಲರ್​ ಶೈಲಿಯ ಸಿನಿಮಾಗಳೇ ಹೆಚ್ಚಿವೆ. ಉಗ್ರಾವತಾರ, ಖೈಮರಾ ಇತ್ತೀಚೆಗೆ ಸೇರ್ಪಡೆಯಾಗಿವೆ. ಈ ಎರಡು ಸಿನಿಮಾದ ಜತೆಗೆ 1980 ಚಿತ್ರವನ್ನು ಪ್ರಿಯಾಂಕಾ ಒಪ್ಪಿಕೊಂಡಿದ್ದರು. ಇದೀಗ ಆ ಚಿತ್ರದ ಫಸ್ಟ್​ ಲುಕ್ ಬಿಡುಗಡೆ ಆಗಿದೆ.

ರೆಟ್ರೋ ಶೈಲಿಯ ಸಿನಿಮಾ ಆಗಿರುವುದರಿಂದ ಅದೇ ಶೈಲಿಯ ಗೆಟಪ್​ನಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 28ರಿಂದ ಚಿತ್ರೀಕರಣ ಆರಂಭವಾಗಿದ್ದು, 80ರಲ್ಲಿ ಕಾಲಘಟ್ಟದಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದಕ್ಕೆ ಕಾಲ್ಪನಿಕ ಅಂಶಗಳನ್ನು ಸೇರಿಸಿಕೊಂಡು ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ರಾಜ್​ಕಿರಣ್​.

ಈ ಹಿಂದೆ ‘ಸವಾರಿ 2’, ‘ವಸಂತ ಕಾಲ’, ‘ಮಿಸ್ಡ್​ ಕಾಲ್’, ‘ಪರಿಧಿ’ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ರಾಜ್​ಕಿರಣ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ.

ಪ್ರಿಯಾಂಕಾ ಉಪೇಂದ್ರ ಜತೆಗೆ ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮ ಮುಂತಾದವರಿದ್ದಾರೆ. ಈ ಚಿತ್ರಕ್ಕೆ ಚಿಂತನ್ ವಿಕಾಸ್ ಸಂಗೀತ ಸಂಯೋಜಿಸುತ್ತಿದ್ದು, ಜೀವನ್ ಅಂತೋಣಿ ಛಾಯಾಗ್ರಹಣ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net