ಕ್ಲಾಸ್​ ತೆಗೆದುಕೊಳ್ಳಲಿದ್ದಾರೆ ಪ್ರೊಫೆಸರ್​ ಮೇಘನಾ ; ‘ಛೂ ಮಂತರ್’, ‘ದ ಜಡ್ಜ್‌ಮೆಂಟ್’ ಚಿತ್ರಗಳಲ್ಲಿ ನಟನೆ

Meghana Gaonkar (4)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಈ ವರ್ಷ ‘ಶಿವಾಜಿ ಸೂರತ್ಕಲ್ 2’ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದ ನಟಿ ಮೇಘನಾ ಗಾಂವ್ಕರ್ ಇದೀಗ ಪ್ರೊಫೆಸರ್‌ಆಗಿ ಕ್ಲಾಸ್ ತೆಗೆದುಕೊಳ್ಳಲು ರೆಡಿಯಾಗಿದ್ದಾರೆ. ಹೌದು, ರವಿಚಂದ್ರನ್ ನಟಿಸುತ್ತಿರುವ, ಗುರುರಾಜ್ ಕುಲಕರ್ಣಿ ನಿರ್ದೇಶಿಸುತ್ತಿರುವ ‘ದ ಜಡ್ಜ್‌ಮೆಂಟ್’ ಚಿತ್ರದಲ್ಲಿ ಪ್ರೊಫೆಸರ್ ಪಾತ್ರದಲ್ಲಿ ಮೇಘನಾ ಕಾಣಿಸಿಕೊಳ್ಳಲಿದ್ದಾರೆ.

‘ಕೊನೆಯ ಒಂದು ಹಾಡಿನ ಶೂಟಿಂಗ್ ಹೊರತುಪಡಿಸಿದರೆ, ‘ದಿ ಜಡ್ಜ್‌ಮೆಂಟ್’ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಡಬ್ಬಿಂಗ್ ಇನ್ನಷ್ಟೇ ಶುರುವಾಗಬೇಕಿದೆ. ರವಿ ಸರ್ ಲಾಯರ್ ಪಾತ್ರದಲ್ಲಿ ನಟಿಸಿದ್ದು, ನಾನು ಅವರ ಪ್ರೊೆಸರ್ ಪತ್ನಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಚಿಕ್ಕ ವಯಸ್ಸಿನಿಂದ ರವಿ ಸರ್ ಸಿನಿಮಾಗಳನ್ನು ನೋಡಿ ಬೆಳೆದವಳು. ಹೀಗಾಗಿ ಅವರ ಜತೆ ತೆರೆ ಹಂಚಿಕೊಂಡಿದ್ದು ಖುಷಿ ನೀಡಿದೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ ಮೇಘನಾ. ಜತೆಗೆ ನವನೀತ್ ನಿರ್ದೇಶನದ, ಶರಣ್, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ ಮತ್ತು ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಛೂ ಮಂತರ್’ ಚಿತ್ರೀಕರಣವನ್ನೂ ಮೇಘನಾ ಪೂರ್ಣಗೊಳಿಸಿದ್ದಾರೆ. ‘ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆದರೆ, ಈಗಲೇ ಪಾತ್ರದ ಬಗ್ಗೆ ರಿವೀಲ್ ಮಾಡಬೇಡಿ ಎಂದು ಚಿತ್ರತಂಡದವರು ಹೇಳಿದ್ದಾರೆ. ಹೀಗಾಗಿ ಹೆಚ್ಚೇನೂ ಹೇಳುವಂತಿಲ್ಲ. ಆದರೆ, ಚಾಲೆಂಜಿಂಗ್ ಪಾತ್ರ, ನಾನಂತೂ ತುಂಬ ಎಂಜಾಯ್ ಮಾಡಿದೆ’ ಎನ್ನುತ್ತಾರೆ.

ಹಾಗೇ ಹೊಸ ಕಥೆಗಳನ್ನು ಕೇಳುತ್ತಿರುವ ಮೇಘನಾ, ಮಹಿಳಾ ಪ್ರಧಾನ ಚಿತ್ರ, ಚಾಲೆಂಜಿಂಗ್ ಪಾತ್ರಗಳ ನಿರೀಕ್ಷೆಯಲ್ಲಿದ್ದಾರಂತೆ. ‘ಕಥೆ, ಪಾತ್ರದ ಬಗ್ಗೆ ಕೇಳಿ ಎಕ್ಸೈಟ್ ಆಗಬೇಕು. ಇದುವರೆಗೆ ಹಲವು ಚಿತ್ರಗಳಲ್ಲಿ, ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ನಟಿಸಿದ್ದೇನೆ. ಚಿತ್ರರಂಗದಲ್ಲಿ ನನ್ನದೇ ಆದ ಸ್ಥಾನ ಮಾಡಿಕೊಂಡಿದ್ದೇನೆ. ಇನ್ನಾದರೂ ಸ್ವಲ್ಪ ಸವಾಲಿನ ಪಾತ್ರದಲ್ಲಿ ಅಭಿನಯಿಸಬೇಕು. ಆ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಬೇಕು. ಅಂತಹ ಕಥೆ, ಕ್ಯಾರಕ್ಟರ್‌ಗಾಗಿ ಎದುರು ನೋಡುತ್ತಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ ಮೇಘನಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net