ಮತ್ತೆ ಕಾಲಿವುಡ್​ಗೆ ಕಾವ್ಯಾ ಶೆಟ್ಟಿ; ಆರ್ಯಗೆ ನಾಯಕಿ ಆಗಿ ನಟನೆ

Kavya Shetty
Published on

ಬೆಂಗಳೂರು: ಕನ್ನಡವಲ್ಲದೆ ಈ ವರ್ಷ ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲೂ ನಟಿಸಿ ಬಂದರು ಕಾವ್ಯಾ ಶೆಟ್ಟಿ. ಇದೀಗ ಹಲವು ವರ್ಷಗಳ ಗ್ಯಾಪ್​ನ ಬಳಿಕ ಪಕ್ಕದ ಕಾಲಿವುಡ್​ಗೂ ಅವರು ವಾಪಸಾಗಿದ್ದಾರೆ. ಒಟಿಟಿಯಲ್ಲಿಯೇ ಎರಡು ಹಿಟ್ ಸಿನಿಮಾ ನೀಡಿದ ನಟ ಆರ್ಯ ನಟಿಸುತ್ತಿರುವ ಹೊಸ ಚಿತ್ರಕ್ಕೆ ಕಾವ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಆ ಚಿತ್ರದ ಶೂಟಿಂಗ್ ಶುರುವಾಗಿದ್ದು, ಕಾವ್ಯಾ ಸಹ ಭಾಗವಹಿಸಿದ್ದಾರೆ.

‘ಟಿಕ್ ಟಿಕ್ ಟಿಕ್’ ಮತ್ತು ಇತ್ತೀಚೆಗೆ ಬಿಡುಗಡೆ ಆಗಿದ್ದ ‘ಟೆಡ್ಡಿ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಶಕ್ತಿ ಸೌಂದರ್ ರಾಜನ್ ಈ ಚಿತ್ರಕ್ಕೂ ಆಕ್ಷನ್-ಕಟ್ ಹೇಳುತ್ತಿದ್ದಾರೆ. ವಿಶೇಷ ಏನೆಂದರೆ, ಈ ಚಿತ್ರವೂ ಸಹ ನಿರ್ದೇಶಕರ ಹಿಂದಿನ ಸಿನಿಮಾಗಳನ್ನೇ ಹೋಲುವ ಸೈನ್ಸ್ ಫಿಕ್ಷನ್ ಶೈಲಿಯಲ್ಲಿ ಇರಲಿದೆಯಂತೆ.

ಈ ಚಿತ್ರದ ಭಾಗವಾಗಿಯಾಗಿ ರುವ ಖುಷಿಯಲ್ಲಿರುವ ಕಾವ್ಯಾ, ‘ಆರ್ಯ ಅವರ ಇತ್ತೀಚಿನ ‘ಸರಪಟ್ಟ ಪರಂಬರೈ’ ಮತ್ತು ‘ಟೆಡ್ಡಿ’ ಸಿನಿಮಾ ನೋಡಿದ್ದೇನೆ. ಅವರೊಂದಿಗೆ ನಟಿಸುತ್ತಿರುವುದಕ್ಕೆ ಖುಷಿ ಇದೆ. ಈ ಸಿನಿಮಾದಲ್ಲಿ ನನಗೆ ಆಕ್ಷನ್ ಅವತಾರ ಇರುವುದರಿಂದ, ಅದಕ್ಕಾಗಿ ತಯಾರಿಯನ್ನೂ ನಡೆಸಿದ್ದೇನೆ. ಜೀವರಕ್ಷಕ ಕಲೆಯ ಮೊರೆ ಹೋಗಿದ್ದೇನೆ’ ಎನ್ನುವ ಕಾವ್ಯಾ, ‘ಇದು ನನ್ನ ಮೊದಲ ತಮಿಳು ಚಿತ್ರವಲ್ಲ. 2015ರಲ್ಲಿಯೇ ‘ಇದು ಎನ್ನ ಮಾಯಂ’ ಚಿತ್ರದಲ್ಲಿ ನಟಿಸಿದ್ದೆ. ಅದಾದ ಬಳಿಕ ಒಳ್ಳೆಯ ಅವಕಾಶಕ್ಕೆ ಕಾದಿದ್ದೆ. ಇದೀಗ ಅದು ಈ ಚಿತ್ರದ ಮೂಲಕ ಸಿಕ್ಕಿದೆ’ ಎನ್ನುತ್ತಾರೆ.

ಈ ಚಿತ್ರದ ಜತೆಗೆ ಕನ್ನಡದ ‘ರವಿ ಬೋಪಣ್ಣ’ ಮತ್ತು ‘ಕಾಡಾ’ ಸಿನಿಮಾ ಕೆಲಸ ಮುಗಿಸಿರುವ ಕಾವ್ಯಾ, ತೆಲುಗಿನಲ್ಲಿ ‘ಗುರ್ತಂದಾ ಸೀತಾಕಲಂ’ನಲ್ಲೂ ನಟಿಸಿದ್ದಾರೆ. ಮಲಯಾಳಂನ ‘ಬ್ರೋ ಡ್ಯಾಡಿ’ ಚಿತ್ರದಲ್ಲೂ ನಟಿಸಿರುವ ಕಾವ್ಯಾ, ಆ ಎರಡೂ ಚಿತ್ರಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net