ಮೂರು ಶೇಡ್​ಗಳಲ್ಲಿ ಹರಿಪ್ರಿಯಾ; ತಾಯಿ ಕಸ್ತೂರ್ ಗಾಂಧಿ ಚಿತ್ರದಲ್ಲೊಂದು ಹೊಸ ಪ್ರಯತ್ನ..

Haripriya
Published on

ಬೆಂಗಳೂರು: ಹರಿಪ್ರಿಯಾ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಅವರ ಸಿನಿಮಾಗಳನ್ನು ಗಮನಿಸಿದರೆ, ಅಲ್ಲಿ ಅದಕ್ಕೆ ಉತ್ತರ ದಕ್ಕುತ್ತದೆ. ಆ ಪೈಕಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ತಾಯಿ ಕಸ್ತೂರ್ ಗಾಂಧಿ’ ಚಿತ್ರವೂ ಒಂದು. ಈ ಚಿತ್ರದಲ್ಲಿ ಗಾಂಧೀಜಿ ಪತ್ನಿ ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದು, ಒಟ್ಟು ಮೂರು ಶೇಡ್​ಗಳು ಅವರಿಗಿವೆ. ಬಯೋಪಿಕ್​ನಲ್ಲಿ ನಟಿಸುವ ಆಸೆಯನ್ನು ಈ ಹಿಂದೆಯೇ ಹರಿಪ್ರಿಯಾ ಹೇಳಿಕೊಂಡಿದ್ದರು. ಆದರೆ, ಸೂಕ್ತ ಕಥೆ ಸಿಕ್ಕಿರಲಿಲ್ಲ. ಇದೀಗ ಆ ಕನಸನ್ನು ನನಸು ಮಾಡಿಕೊಂಡಿದ್ದಾರವರು.

‘ಬೇರೆ ಭಾಷೆಗೆ ಹೋಲಿಸಿದರೆ ಕನ್ನಡದಲ್ಲಿ ಬಯೋಪಿಕ್ ಪ್ರಯತ್ನಗಳು ಕಡಿಮೆ. ಹೀಗಿರುವಾಗ ನನಗೆ ಸಿಕ್ಕ ಅವಕಾಶವೇ ‘ತಾಯಿ ಕಸ್ತೂರ್ ಗಾಂಧಿ’. ಈ ಚಿತ್ರದಲ್ಲಿ ಯೌವ್ವನ, ವಯಸ್ಕ ಮತ್ತು ವೃದ್ಧೆ ಹೀಗೆ ಮೂರು ಶೇಡ್​ಗಳಲ್ಲಿ ನನ್ನನ್ನು ನೋಡಬಹುದು’ಎನ್ನುವ ಹರಿಪ್ರಿಯಾ, ಸಿನಿಮಾದಲ್ಲೇನಿರಲಿದೆ ಎಂಬ ಬಗ್ಗೆಯೂ ಸುಳಿವು ನೀಡುತ್ತಾರೆ. ‘ಈಗಾಗಲೇ ಗಾಂಧೀಜಿ ಬಗ್ಗೆ ಸಿನಿಮಾಗಳು ಬಂದಿವೆ. ಆದರೆ, ಅವರು ಮಹಾತ್ಮ ಆಗುವಲ್ಲಿ ಪತ್ನಿ ಕಸ್ತೂರ್ ಬಾ ಪಾತ್ರ ಎಷ್ಟು ಮಹತ್ವದ್ದಾಗಿತ್ತು ಎಂಬುದನ್ನು ಪರಿಣಾಮಕಾರಿಯಾಗಿ ಯಾವ ಸಿನಿಮಾದಲ್ಲಿಯೂ ತೋರಿಸಿಲ್ಲ. ಇದೀಗ ಅದು ಈ ಚಿತ್ರದ ಮೂಲಕ ನೆರವೇರಿದೆ’ ಎನ್ನುತ್ತಾರೆ ಹರಿಪ್ರಿಯಾ.

ಬರಗೂರು ರಾಮಚಂದ್ರಪ್ಪ ಬರೆದ ‘ಕಸ್ತೂರ್ ಬಾ ವರ್ಸಸ್ ಗಾಂಧಿ’ ಪುಸ್ತಕ ಆಧರಿಸಿ ಈ ಚಿತ್ರ ಸಿದ್ಧವಾಗಿದೆ. ಬಹುತೇಕ ಸೆಟ್​ನಲ್ಲಿ ಚಿತ್ರೀಕರಣ ಆಗಿರುವ ಈ ಚಿತ್ರದ ಡಬ್ಬಿಂಗ್ ಸಹ ಮುಗಿದಿದ್ದು, ಮೊದಲಿಗೆ ಕನ್ನಡದಲ್ಲಿ ತೆರೆಗೆ ಬರಲಿದೆ. ‘ಅಮೃತಮತಿ’ ಚಿತ್ರದ ತಾಂತ್ರಿಕ ವರ್ಗವೇ ಇಲ್ಲಿಯೂ ಮುಂದುವರಿದೆ. ಗಾಂಧಿಯಾಗಿ ಕಿಶೋರ್ ನಟಿಸಿದ್ದಾರೆ. ನಾಗರಾಜ್ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net