

ಹೈದರಾಬಾದ್: ಟಾಲಿವುಡ್ನಲ್ಲಿ ಸ್ಟಾರ್ ಹೀರೋಯಿನ್ ಇಮೇಜ್ ಪಡೆದಿರುವ ತೆಲುಗು ಹುಡುಗಿಯರು ತುಂಬಾ ಕಡಿಮೆ. ಅಂತಹವರಲ್ಲಿ ನಟಿ ಅಂಜಲಿ ಕೂಡ ಒಬ್ಬರು. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಹುಟ್ಟಿದ ಅಂಜಲಿ, ಗಣಿತದಲ್ಲಿ ಪದವಿ ಓದುವಾಗಲೇ ಕಿರುಚಿತ್ರಗಳು ಮತ್ತು ಮಾಡೆಲಿಂಗ್ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ತೆಲುಗಿನ ಹುಡುಗಿಯಾದರೂ ಮೊದಲ ಅವಕಾಶ ಬಂದಿದ್ದು ತಮಿಳಿನಲ್ಲಿ. ‘ಶಾಪಿಂಗ್ ಮಾಲ್’ ಸಿನಿಮಾದಲ್ಲಿ ಲೋಕಲ್ ಹುಡುಗಿಯಾಗಿ ನಟಿಸಿ ಅಪಾರ ಕ್ರೇಜ್ ಗಳಿಸಿದ್ದರು. ಇದಾದ ಬಳಿಕ 'ಜರ್ನಿ' ಚಿತ್ರದಲ್ಲಿ ತಮ್ಮ ನಟನೆಗಾಗಿ ತುಂಬಾ ಮೆಚ್ಚುಗೆಗೆ ಅಂಜಲಿ ಪಾತ್ರರಾದರು. ಅಲ್ಲದೆ, ಈ ಸಿನಿಮಾ ಮೂಲಕ ಅಂಜಲಿ ಜೀವನವೇ ಬದಲಾಯಿತು. ಇದೀಗ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈವೆಂಟ್‌ವೊಂದರಲ್ಲಿ ಅಂಜಲಿ ಅವರು ಮದುವೆ ಕುರಿತು ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
2011ರಲ್ಲಿ ವೆಂಕಟೇಶ್ ಮತ್ತು ಮಹೇಶ್ ಬಾಬು ಅಭಿನಯದ ಸೂಪರ್ ಹಿಟ್ ಸಿನಿಮಾ ‘ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು’ ಚಿತ್ರದಲ್ಲಿ ಸೀತೆಯ ಪಾತ್ರದಲ್ಲಿ ನಟಿಸಿದ್ದ ಅಂಜಲಿ, ನಮ್ಮ ಮನೆಯ ಹುಡುಗಿಯಾಗಿ ಕಾಣಿಸಿಕೊಂಡು ತೆಲುಗು ಪ್ರೇಕ್ಷಕರ ಮನ ಕದ್ದಿದ್ದರು. ಈ ಚಿತ್ರದ ನಂತರ ಅಂಜಲಿಗೆ ನಾಯಕಿಯಾಗಿ ಸಾಲು ಸಾಲು ಅವಕಾಶಗಳು ಬಂದವು. ಸದ್ಯ ತೆಲುಗು, ತಮಿಳು ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ನಾಯಕಿ ಮಾತ್ರವಲ್ಲದೆ ಹಲವು ಚಿತ್ರಗಳಲ್ಲಿ ಐಟಂ ಸಾಂಗ್‌ಗಳಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ಅಂಜಲಿ ಹಾರರ್ ಜಾನರ್‌ನ ಹಲವು ಚಿತ್ರಗಳಲ್ಲಿ ನಟಿಸಿ ಉತ್ತಮ ಯಶಸ್ಸನ್ನು ಪಡೆಯುತ್ತಿದ್ದಾರೆ.
ಅಂಜಲಿ ಅಭಿನಯದ ಹಾರರ್ ಸಿನಿಮಾ ‘ಗೀತಾಂಜಲಿ’ ಆಗ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಗೀತಾಂಜಲಿ ಈಸ್ ಬ್ಯಾಕ್ ಅಗೇನ್ ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರದ ಮುಂದುವರಿದ ಭಾಗವಾಗಿ ತಯಾರಾಗಿದೆ. ಈ ಚಿತ್ರದ ಟ್ರೇಲರ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಅಂಜಲಿ ತಮ್ಮ ಮದುವೆಯ ವದಂತಿಗಳಿಗೆ ಪ್ರತಿಕ್ರಿಯಿಸಿದರು. ಡಿವೋರ್ಸ್ ಪಡೆದ ನಿರ್ಮಾಪಕನ ಜತೆ ಅಂಜಲಿ ಸಪ್ತಪದಿ ತುಳಿಯಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಇದಕ್ಕೆ ಅಂಜಲಿ ಸ್ಪಷ್ಟನೆ ನೀಡಿದ್ದಾರೆ.
ಇದುವರೆಗೆ ಮಾಧ್ಯಮಗಳಲ್ಲಿ ನನಗೆ ಗೊತ್ತಿಲ್ಲದೆ ನಾಲ್ಕು ಮದುವೆಗಳು ನಡೆದಿವೆ. ಐದನೇ ಬಾರಿಗೆ ಮತ್ತೆ ಮದುವೆ ಮಾಡಿಸುತ್ತಿದ್ದಾರೆ. ಆದರೆ, ಆ ಸುದ್ದಿಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವೆಲ್ಲವೂ ಸುಳ್ಳು ಸುದ್ದಿಗಳು. ನಾನು ಮದುವೆಯಾಗುವುದು ಖಚಿತವಾದರೆ, ಸಾರ್ವಜನಿಕವಾಗಿ ಪ್ರಕಟಿಸುತ್ತೇನೆ. ಆದರೆ, ಇದಕ್ಕೆ ಸ್ವಲ್ಪ ಸಮಯಾವಕಾಶವಿದೆ ಎಂದಿದ್ದಾರೆ. ಈ ಮೂಲಕ ಮದುವೆಯ ವದಂತಿಗೆ ಅಂಜಲಿ ತೆರೆ ಎಳೆದಿದ್ದಾರೆ.
ಅಂದಹಾಗೆ ಏಪ್ರಿಲ್ 11 ರಂದು ಗೀತಾಂಜಲಿ ಇಸ್ ಬ್ಯಾಕ್ ಅಗೇನ್ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. (ಏಜೆನ್ಸೀಸ್)