More

    ದಕ್ಷಿಣ ಸೂರ್ಯನ ತೇಜಸ್ಸು ತಗ್ಗಿಸಲು ಕೈ ಸೌಮ್ಯಾಸ್ತ್ರ!

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಕಟ್ಟಿದ ಏಳು ಸುತ್ತಿನ ಕೋಟೆಯನ್ನು ಸದ್ಯಕ್ಕಂತೂ ಬೇಧಿಸುವವರಿಲ್ಲ ಎಂಬ ಕಲ್ಪನೆ ರಾಷ್ಟ್ರಮಟ್ಟದಲ್ಲಿ ಗಟ್ಟಿಯಾಗಿದೆ. ಹಾಗೆಂದು ಮೇಲ್ನೋಟಕ್ಕೆ ಕಾಣಿಸಿದರೂ, ಈ ಬಾರಿ ಕಾಂಗ್ರೆಸ್ ನಿರೀಕ್ಷೆಗೆ ಮೀರಿ ಬೆವರು ಹರಿಸುತ್ತಿದ್ದು ಅಚ್ಚರಿ ಫಲಿತಾಂಶ ನೀಡಲು ಪ್ರಯತ್ನ ನಡೆಸಿದೆ.

    ಕಳೆದ ಬಾರಿ ಚುನಾವಣೆಯಲ್ಲಿ ಕಡೇ ಕ್ಷಣದಲ್ಲಿ ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ದೊಡ್ಡ ಗೆಲುವು ಸಾಧಿಸಿದ್ದ ತೇಜಸ್ವಿ ಸೂರ್ಯಗೆ ಮರುಸ್ಪರ್ಧೆಗೆ ಪಕ್ಷ ಅವಕಾಶ ನೀಡಿದೆ. ಇತ್ತ ಕಾಂಗ್ರೆಸ್ ತನ್ನ ಕಾರ್ಯತಂತ್ರ ಬದಲಿಸಿದ್ದು, ಕ್ಷೇತ್ರಕ್ಕೆ ಚಿತಪರಿಚಿತರಾದ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಕಳೆದ ಎಂಟು ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಜಯಿಸಿದೆ. 1951 ಹಾಗೂ 1989ರಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿರುವುದು ಇತಿಹಾಸ. ಸೌಮ್ಯಾ ರೆಡ್ಡಿ ಹಿಂದಿರುವ ಶಕ್ತಿ ಅವರ ತಂದೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ. ಈ ಚುನಾವಣೆ ಸೌಮ್ಯಾ ರೆಡ್ಡಿ ವರ್ಸಸ್ ತೇಜಸ್ವಿ ಸೂರ್ಯ ಎಂದು ವ್ಯಾಖ್ಯಾನಿಸುವ ಬದಲು ರಾಮಲಿಂಗಾ ರೆಡ್ಡಿ ವರ್ಸಸ್ ಬಿಜೆಪಿ ಎಂದು ಚಿತ್ರಿತವಾಗಿದೆ. ಒಟ್ಟಾರೆ ಚುನಾವಣಾ ಕಣ ‘ಒನ್ ಸೈಡೆಡ್’ ಮ್ಯಾಚ್ ರೀತಿಯಂತೂ ಕಾಣಿಸುತ್ತಿಲ್ಲ.

    ಕ್ಷೇತ್ರ ಗೆಲ್ಲಲು ರೆಡ್ಡಿ ಪಟ್ಟು: 1983ರಿಂದಲೂ ರಾಜಕೀಯದಲ್ಲಿರುವ ರಾಮಲಿಂಗಾ ರೆಡ್ಡಿ 8 ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಬೆಂಗಳೂರಿನ ರಾಜಕೀಯವನ್ನು ಅರೆದು ಕುಡಿದಿದ್ದಾರೆ. ಇದೀಗ ಅವರ ಪುತ್ರಿಯನ್ನು ಕಣಕ್ಕಿಳಿಸುವ ಮೂಲಕ ತಮ್ಮ ರಾಜಕೀಯ ಅನುಭವವನ್ನು ಒರೆಗೆ ಹಚ್ಚಿದ್ದಾರೆ. ತಮಗೆ ಗೊತ್ತಿರುವ ಎಲ್ಲ ಪಟ್ಟುಗಳನ್ನು ಹಾಕಿ ಕ್ಷೇತ್ರ ಗೆಲ್ಲಲು ಶ್ರಮ ಹಾಕುತ್ತಿದ್ದಾರೆ.

    ದಕ್ಷಿಣ ಸೂರ್ಯನ ತೇಜಸ್ಸು ತಗ್ಗಿಸಲು ಕೈ ಸೌಮ್ಯಾಸ್ತ್ರ!

    ಬಿಜೆಪಿಯಲ್ಲಿ ಗೊಂದಲ: ತೇಜಸ್ವಿ ಸೂರ್ಯ ವಿರುದ್ಧ ಅಸಮಾಧಾನವನ್ನು ಬಿಜೆಪಿಯ ಅನೇಕರು ಹೊರಹಾಕಿದ್ದಾರೆ. ವೈಯಕ್ತಿಕವಾಗಿ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಎಂಬ ಅಸಮಾಧಾನ ಅನೇಕರಲ್ಲಿದೆ. ಜತೆಗೆ, ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪಕ್ಷದ ಭದ್ರಕೋಟೆಯಾಗಿ ಬೆಳೆಸಿದ ಅನಂತಕುಮಾರ್ ಇಂದಿಲ್ಲ. ಆದರೆ ಅವರ ಆಪ್ತ ಬಳಗ, ಕುಟುಂಬದವರನ್ನು ಕಡೆಗಣಿಸಲಾಗಿದೆ ಎಂಬ ತಣ್ಣನೆಯ ಅಸಮಾಧಾನ ಜನರ ನಡುವೆ ಚರ್ಚೆಯಾಗುತ್ತಲೇ ಇದೆ.

    ಜೆಡಿಎಸ್ ಬೋನಸ್: ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್​ಗೆ ದೊಡ್ಡ ಮತ ಬ್ಯಾಂಕ್ ಇಲ್ಲ. ಆದರೂ ಬಿಜೆಪಿಗೆ ಅನುಕೂಲ ಮಾಡಿಕೊಡುವಷ್ಟು ಮತವಂತೂ ಇದ್ದೇ ಇದೆ. ಹಾಗೆ ನೋಡಿದರೆ ಒಕ್ಕಲಿಗ ಮತಗಳು ಹೆಚ್ಚಾಗಿವೆ. ವಿಧಾನಸಭೆ ಚುನಾವಣೆಯಲ್ಲಿ ಆಗುವ ಮತ ಸಮೀಕರಣ ಲೋಕಸಭೆಯಲ್ಲಾಗುವುದಿಲ್ಲ. ಇದು ಬಿಜೆಪಿಗೆ ವರದಾನ.

    ಕಾಂಗ್ರೆಸ್ ಆಶಾಭಾವನೆ: ಕಾಂಗ್ರೆಸ್ ಶಾಸಕರಿರುವ ವಿಜಯನಗರ, ಗೋವಿಂದರಾಜ ನಗರ, ಬಿಟಿಎಂ ವಿಧಾನಸಭಾ ಕ್ಷೇತ್ರಗಳು ಮತ್ತು ತೀರಾ ಕಡಿಮೆ ಅಂತರದಲ್ಲಿ ಸೋತ ಜಯನಗರ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸೋತರು ಹೆಚ್ಚು ಪ್ರಭಾವ ಹೊಂದಿರುವ ಬೊಮ್ಮನ ಹಳ್ಳಿಯಲ್ಲಿ ತನ್ನ ಅಭ್ಯರ್ಥಿಗೆ ಹೆಚ್ಚಿನ ಲೀಡ್ ತಂದುಕೊಟ್ಟರೆ ಮತ್ತು ಬಿಜೆಪಿ ಅಭ್ಯರ್ಥಿ ವಿರುದ್ಧ ಇರುವ ನಕಾರಾತ್ಮಕ ಅಂಶವನ್ನು ಬಳಸಿಕೊಂಡರೆ ಕ್ಷೇತ್ರ ಗೆಲ್ಲಲು ಅವಕಾಶವಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.

    ಬಿಜೆಪಿ ಭರವಸೆ: ಮೂರು ದಶಕದಿಂದಲೂ ಬಿಜೆಪಿ ಇಲ್ಲಿ ಭದ್ರವಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಐವರು ಶಾಸಕರಿದ್ದಾರೆ. ಇಲ್ಲಿ ಅಭ್ಯರ್ಥಿ ಮುಖ್ಯವೇ ಅಲ್ಲ ಎಂಬ ವಾತಾವರಣ ಇದೆ. ಹಾಗೆಯೇ, ಕಾಂಗ್ರೆಸ್​ಗೆ ಕೆಲವು ವಿಧಾನಸಭಾ ಕ್ಷೇತ್ರದಲ್ಲಿ ನಾಯಕತ್ವ ಇಲ್ಲ. ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಡೆಸಿದ ತಂತ್ರಗಾರಿಕೆಗಳೆಲ್ಲ ತಲೆಕೆಳಗಾಗಿದ್ದು, ಈ ಬಾರಿಯೂ ಗೆಲುವಿಗೆ ಯಾವುದೇ ಅಡ್ಡಿ ಇಲ್ಲ. ಲೀಡ್ ಎಷ್ಟೆಂಬುದಷ್ಟೇ ನಿರ್ಧಾರವಾಗಬೇಕೆಂದು ಬಿಜೆಪಿ ಎಲೆಕ್ಷನ್ ತಂತ್ರಗಾರರು ವಿವರಿಸುತ್ತಾರೆ.

    ತೇಜಸ್ವಿ ಸೂರ್ಯ ಪ್ಲಸ್-ಮೈನಸ್

    1. ಬಿಜೆಪಿ ಭದ್ರಕೋಟೆ ಜತೆಗೆ ‘ಮೋದಿ ಮತ ಬ್ಯಾಂಕ್’

    2. ಉತ್ತಮ ಭಾಷಣಕಾರ, ಅರಿವಿರುವ ವಿಚಾರಗಳನ್ನು ಜನರಿಗೆ ತಲುಪಿಸುವ ಸಾಮರ್ಥ್ಯ

    3. ಐದು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿರುವುದು

    4. ಭಾರಿ ಅಂತರದಲ್ಲಿ ಗೆಲ್ಲುವೆ ಎಂಬ ಅತಿಯಾದ ಆತ್ಮವಿಶ್ವಾಸ

    5. ವಾರ್ಡ್ ಹಂತದ ಮುಖಂಡರಲ್ಲಿ ಸದಾಭಿಪ್ರಾಯ ಇಲ್ಲದಿರುವುದು

    ಸೌಮ್ಯಾ ರೆಡ್ಡಿ ಪ್ಲಸ್-ಮೈನಸ್

    1. ಜಯನಗರ ಶಾಸಕಿಯಾಗಿದ್ದರಿಂದ ಜನ ಸಂಪರ್ಕ, ಪರಿಚಿತ ವ್ಯಕ್ತಿ

    2. ತಂದೆ ರಾಮಲಿಂಗಾ ರೆಡ್ಡಿ ಹೊಂದಿರುವ ವರ್ಚಸ್ಸು ಮತ್ತು ಪ್ರಭಾವ

    3. ಕಳೆದ ಚುನಾವನೆ ಸೋಲಿನ ಅನುಕಂಪ, ಕೈ ಗ್ಯಾರಂಟಿ ಯೋಜನೆ ಲಾಭ

    4. ವೈಯಕ್ತಿಕವಾಗಿ ನಕಾರಾತ್ಮಕ ಇಮೇಜ್ ಸುಧಾರಿಸಿಕೊಳ್ಳದೇ ಇರುವುದು

    5. ಬಿಜೆಪಿ ಬಿಗಿಹಿಡಿತದ ಕ್ಷೇತ್ರಗಳಲ್ಲಿ ಕೈ ಸ್ಥಳೀಯ ನಾಯಕತ್ವದ ಕೊರತೆ

    ಏಪ್ರಿಲ್‌ 14 ರಿಂದ ಬಲ್ಕ್‌ ಬಳಕೆದಾರರಿಗೆ ಶೇ 10ರಷ್ಟು ಕಾವೇರಿ ನೀರು ಪೂರೈಕೆ ಕಡಿತ

    ಆಸ್ತಿ ಘೋಷಣೆ ಮಾಡಿದ ಡಾ.ಮಂಜುನಾಥ್‌: ಸ್ಥಿರಾಸ್ತಿ-ಚರಾಸ್ತಿ ಮೌಲ್ಯವೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts