ಕಡಿಮೆ ಸಮಯದಲ್ಲಿ ಮಿಂಚಿ ಮರೆಯಾದವರು ...

Death - Final
Published on

ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿ ನಾಳೆಗೆ ಒಂದು ವಾರ. ಈ ಒಂದು ವಾರದಲ್ಲಿ ಅವರನ್ನು ಸಾಕಷ್ಟು ಜನ ನೆನಪಿಸಿಕೊಂಡಿದ್ದಾರೆ. ಅವರ ಸಹೃದಯತೆ, ಪ್ರತಿಭೆ ಬಗ್ಗೆ ಸಾಕಷ್ಟು ಜನ ಮಾತನಾಡಿದ್ದಾರೆ. ಹಾಗೆ ಮಾತನಾಡಿದವರೆಲ್ಲಾ, ಚಿರು ಬಹಳ ಚಿಕ್ಕ ವಯಸ್ಸಿಗೆ ಎಲ್ಲರನ್ನೂ ಅಗಲಿದ್ದಾರೆ ಎಂದು ಹೇಳುವುದನ್ನು ಮರೆತಿಲ್ಲ.

ಒಬ್ಬ ಮನುಷ್ಯ ತುಂಬು ಜೀವನ ನಡೆಸಿದ್ದರೆ ಅಥವಾ ಧೀರ್ಘ ಕಾಲದ ಅನಾರೋಗ್ಯದಿಂದ ಬಳಲಿ ಸಾವಿಗೀಡಾಗಿದ್ದರೆ, ಅಷ್ಟೊಂದು ಮರುಕಪಡುವ ಕಾರಣಗಳಿರುವುದಿಲ್ಲ. ಆದರೆ, ಚಿರಂಜೀವಿ ಅವರದ್ದು ಸಾಯುವ ವಯಸ್ಸಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಅವರ ವೃತ್ತಿಜೀವನಕ್ಕೆ ಇತ್ತೀಚೆಗಷ್ಟೇ ಒಂದು ಹೊಸ ಹುರುಪು ಸಿಕ್ಕಿತ್ತು. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಅವರ ಮೂರು ಚಿತ್ರಗಳು ಬಿಡುಗಡೆಯಾಗಿದ್ದವು. ಇನ್ನಷ್ಟು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದರು. ಹೀಗೆ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಅವರು ಇನ್ನಿಲ್ಲವಾಗಿದ್ದು ನಿಜಕ್ಕೂ ಬೇಸರದ ಸಂಗತಿ.

ಹಾಗೆ ನೋಡಿದರೆ, ಕನ್ನಡ ಚಿತ್ರರಂಗದಲ್ಲಿ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗ ನಿಧನರಾದವರ್ಯಾರು ಎಂದರೆ ಮೊದಲು ನೆನಪಿಗೆ ಬರುವುದು ಶಂಕರ್​ ನಾಗ್​ ಮತ್ತು ಸುನೀಲ್​. ಇಬ್ಬರೂ ನಿಧನರಾಗುವುದಕ್ಕೆ ಮುನ್ನ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದರು. ಚಿತ್ರರಂಗಕ್ಕೆ ಇಬ್ಬರೂ ಬಂದು ಹೆಚ್ಚು ವರ್ಷಗಳಾಗಿರಲಿಲ್ಲ. ಅಷ್ಟೇ ಅಲ್ಲ, ಇಬ್ಬರ ವಯಸ್ಸು ಸಹ ಹೆಚ್ಚಿರಲಿಲ್ಲ. ಶಂಕರ್​ ನಾಗ್​ ಅವರು ತಮ್ಮ 35ನೇ ವಯಸ್ಸಿನಲ್ಲಿ ನಿಧನರಾದರೆ, ಸುನೀಲ್​ ನಿಧನರಾದಾಗ ಅವರಿಗೆ 30 ವರ್ಷ ವಯಸ್ಸಾಗಿತ್ತು. ಈಗ ಆ ಸಾಲಿಗೆ ಚಿರಂಜೀವಿ ಸರ್ಜಾ ಸಹ ಸೇರ್ಪಡೆಯಾಗಿದ್ದಾರೆ. ಆದರೆ, ಮೂವರ ಸಾವಿನಲ್ಲಿ ಒಂದು ವ್ಯತ್ಯಸವೆಂದರೆ, ಶಂಕರ್​ ನಾಗ್​ ಮತ್ತು ಸುನೀಲ್​ ಅವರು ಅಪಘಾತದಿಂದ ನಿಧನರಾದರೆ, ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ನಿಧನರಾದರು.

30 ಪ್ಲಸ್​ ವಯಸ್ಸಿನಲ್ಲಿ ನಿಧನರಾದ ಸಾಲಿನಲ್ಲಿ ಬರೀ ಹೀರೋಗಳಷ್ಟೇ ಅಲ್ಲ, ಹೀರೋಯಿನ್​ಗಳು ಸಹ ಇದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಿನುಗುತಾರೆ ಎಂದೇ ಜನಪ್ರಿಯವಾಗಿದ್ದ ಕಲ್ಪನಾ ಅವರು ಈ ಸಾಲಿನಲ್ಲಿ ಪ್ರಮುಖರು. ವೃತ್ತಿಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದ ಅವರು, 70ರ ದಶಕದ ಕೊನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಇನ್ನಿಲ್ಲವಾದರು. ಇನ್ನು ನಟಿ ಸೌಂದರ್ಯ ಅವರು ಹೆಲಿಕಾಫ್ಟರ್​ ಕ್ರಾಶ್​ನಿಂದಾಗಿ ಕೊನೆಯುಸಿರೆಳೆದರು.

ಹೀಗೆ ವಯಸ್ಸಲ್ಲದ ವಯಸ್ಸಿನಲ್ಲಿ ನಿಧನರಾದ ಕನ್ನಡದ ಹಲವು ಜನಪ್ರಿಯ ಕಲಾವಿದರು, ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿದ್ದಾರೆ ಎಂದರೆ ಕಾರಣ ಅವರ ಪ್ರತಿಭೆ ಮತ್ತು ಸಾಧನೆ. ಎಲ್ಲಾ ಸರಿ, ಇಷ್ಟಕ್ಕೂ ಇಷ್ಟು ಬೇಗ ಹೋಗುವ ಅವಸರವಾದರೂ ಏನಿತ್ತು? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net