ಯೋಗಿ, ಲಂಕೆ ಮತ್ತು ಸರೋಜ: ‘ಲೂಸ್ ಮಾದ’ನ ಜನ್ಮದಿನಕ್ಕೆ ಪೋಸ್ಟರ್ ಗಿಫ್ಟ್

Yogi
Published on

ಬೆಂಗಳೂರು: ‘ಲೂಸ್ ಮಾದ’ ಖ್ಯಾತಿಯ ಯೋಗಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಮಂಗಳವಾರ 31ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಅದ್ದೂರಿತನ ಬದಿಗಿರಿಸಿ ಸರಳವಾಗಿ ಮನೆಯವರೊಂದಿಗೆ ಮತ್ತು ಕೆಲವೇ ಆಪ್ತ ಸ್ನೇಹಿತರ ಜತೆಗೆ ಕೋಣನಕುಂಟೆ ಮನೆಯಲ್ಲಿ ಆಚರಿಸಿಕೊಂಡಿದ್ದಾರೆ. ಈ ನಡುವೆ ಹಲವು ಸಿನಿಮಾ ತಂಡಗಳಿಂದ ಪೋಸ್ಟರ್, ಮೋಷನ್ ಪೋಸ್ಟರ್ ಉಡುಗೊರೆಯನ್ನು ಪಡೆದುಕೊಂಡಿದ್ದಾರೆ ಯೋಗಿ. ಯೋಗಿ ಕೈಯಲ್ಲಿ ‘ಲಂಕೆ’, ‘ಒಂಭತ್ತನೇ ದಿಕ್ಕು’, ‘ನಾನು ಅದು ಮತ್ತು ಸರೋಜ’ ಸೇರಿ ಮೂರ್ನಾಲ್ಕು ಸಿನಿಮಾಗಳಿವೆ. ಬಹುತೇಕ ಎಲ್ಲ ಸಿನಿಮಾಗಳ ಶೂಟಿಂಗ್ ಕೆಲಸ ಮುಗಿದಿವೆ.

ಇದೀಗ ಈ ಮೂರು ಸಿನಿಮಾಗಳ ಪೈಕಿ ರಾಮ್್ರಸಾದ್ ನಿರ್ದೇಶನದ ‘ಲಂಕೆ’ ಮತ್ತು ವಿನಯ್ ಪ್ರೀತಮ್ ಆಕ್ಷನ್ ಕಟ್ ಹೇಳಿರುವ ‘ನಾನು ಅದು ಮತ್ತು ಸರೋಜ’ ಚಿತ್ರಗಳ ಮೋಷನ್ ಪೋಸ್ಟರ್ ಬಿಡುಗಡೆ ಆದರೆ, ದಯಾಳ್ ಪದ್ಮನಾಭನ್ ನಿರ್ದೇಶನದ ‘ಒಂಭತ್ತನೇ ದಿಕ್ಕು’ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿ ಶುಭಾಶಯ ಕೋರಿದೆ. ನಾಯಕ ನಟರ ಜನ್ಮದಿನಕ್ಕೆ ಹೊಸ ಸಿನಿಮಾಗಳ ಘೋಷಣೆ ಆಗುವುದು ಸರ್ವೆ ಸಾಮಾನ್ಯ. ಆದರೆ, ಯೋಗಿ ಜನ್ಮದಿನಕ್ಕೆ ಈ ಹಿಂದೆ ಒಪ್ಪಿಕೊಂಡಿದ್ದ ಮತ್ತು ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡಗಳಿಂದ ಮಾತ್ರ ಶುಭಾಶಯದ ಪೋಸ್ಟರ್​ಗಳು ಬಿಡುಗಡೆಯಾಗಿದ್ದು ಬಿಟ್ಟರೆ, ಮಿಕ್ಕಂತೆ ಯಾವುದೇ ಹೊಸ ಚಿತ್ರಗಳ ಘೋಷಣೆಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net