ಬರೀ ಬಾಯಲ್ಲಿ ಕನ್ನಡ ಕನ್ನಡ ಅನ್ನಬಾರದು... ಕಮಲ್​ ಹಾಸನ್​ ವಿವಾದಕ್ಕೆ ಶಿವಣ್ಣನ ಮೊದಲ ಪ್ರತಿಕ್ರಿಯೆ! Kamal Haasan

Kamal Haasan
Published on

Kamal Haasan : ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳುವ ಮೂಲಕ ನಟ ಕಮಲ್​ ಹಾಸನ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವುದು ಗೊತ್ತೇ ಇದೆ. ಇದನ್ನು ಖಂಡಿಸಿ ಕನ್ನಡಿಗರೆಲ್ಲರೂ​ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ, ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ. ಆದರೆ, ಕಮಲ್​ ಹಾಸನ್​ ಮಾತ್ರ ನಾನು ಕ್ಷಮೆ ಕೋರುವುದಿಲ್ಲ ಎನ್ನುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದರ ನಡುವೆ ಈ ವಿವಾದದ ಬಗ್ಗೆ ನಟ ಶಿವರಾಜ್​ಕುಮಾರ್​ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಏನಿದು ವಿವಾದ?

ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಥಗ್​ ಲೈಫ್​ ಹೆಸರಿನ ಸಿನಿಮಾದಲ್ಲಿ ಕಮಲ್​ ಹಾಸನ್​, ಸಿಂಬು, ತ್ರಿಷಾ ಹಾಗೂ ಅಭಿರಾಮಿ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್​ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಇತ್ತೀಚಗೆ ಸಿನಿಮಾದ ಆಡಿಯೋ ಲಾಂಚ್​ ನೆರವೇರಿತು. ಈ ಸಮಾರಂಭಕ್ಕೆ ಅತಿಥಿಯಾಗಿ ನಟ ಶಿವರಾಜ್​ಕುಮಾರ್​ ಭಾಗವಹಿಸಿದ್ದರು. ಅವರನ್ನು ಉದ್ದೇಶಿಸಿ ಮಾತನಾಡಿದ ಕಮಲ್​ ಹಾಸನ್​, ಆ ಊರಿನಲ್ಲಿರುವ ನನ್ನ ಕುಟುಂಬ. ಹೀಗಾಗಿಯೇ ಅವರು ಇಲ್ಲಿಗೆ ಬಂದಿದ್ದಾರೆ. ಅದಕ್ಕಾಗಿಯೇ ನಾನು ನನ್ನ ಮಾತು ಆರಂಭಿಸುವುದಕ್ಕೂ ಮುನ್ನವೇ ಉಸಿರೇ, ತಮಿಳೇ ಅಂತ ಆರಂಭಿಸಿದ್ದೆ.. ಅದರಲ್ಲಿ ತಮಿಳಿನಿಂದ ಹುಟ್ಟಿದ್ದೇ ನಿಮ್ಮ ಭಾಷೆ..ಹಾಗಾಗಿ ನೀವು ಕೂಡ ಅದರಲ್ಲಿ ಸೇರಿಕೊಳ್ತೀರಿ ಎಂದು ಹೇಳಿದ್ದರು. ಇದೇ ಹೇಳಿಕೆ ಇದೀಗ ಕನ್ನಡಿಗರಲ್ಲಿ ಆಕ್ರೋಶ ಕಟ್ಟೆ ಹೊಡೆಯುವಂತೆ ಮಾಡಿದೆ.

ಶಿವಣ್ಣ ಹೇಳಿದ್ದೇನು?

ಖಾಸಗಿ ವಾಹಿನಿಯ ಸಮಾರಂಭವೊಂದರಲ್ಲಿ ಮಾತನಾಡಿರುವ ಶಿವಣ್ಣ, ಮೊದಲ ಬಾರಿಗೆ ಕಮಲ್​ ಹಾಸನ್​ ಕನ್ನಡ ವಿವಾದಕ್ಕೆ ಸ್ಪಷ್ಟನೆ ನೀಡಿದರು. ಕಮಲ್​ ಹಾಸನ್​ ಅವರು ಕನ್ನಡವನ್ನು ತುಂಬಾ ಪ್ರೀತಿ ಮಾಡುತ್ತಾರೆ. ನಮ್ಮ ತಂದೆಯವರ ಬಗ್ಗೆ ಅಷ್ಟೇ ಗೌರವ ಕೊಡುತ್ತಾರೆ. ನಿನ್ನೆ ಬಂದಾಗಲೂ ಅಷ್ಟೇ ಚೆನ್ನಾಗಿ ಕನ್ನಡ ಮಾತನಾಡಿದ್ದಾರೆ. ಬೆಂಗಳೂರು ಬಗ್ಗೆಯೂ ಗೌರವದಿಂದ ಮಾತನಾಡಿದ್ದಾರೆ. ನಾವು ಅವರನ್ನು ನೋಡಿ ಬೆಳೆದವರು. ನಾನು ಕೂಡ ಅವರ ಬಹುದೊಡ್ಡ ಅಭಿಮಾನಿ. ನನಗೆ ಅವರೇ ಸ್ಫೂರ್ತಿ. ನನ್ನ ನೆಚ್ಚಿನ ನಟ ಕೂಡ ಅವರೇ. ಪ್ರಸ್ತುತ ಬೆಳವಣಿಗೆ ಖಂಡಿತ ಅವರಿಗೆ ಅರ್ಥವಾಗಿರುತ್ತದೆ. ಅವರು ಏನು ಮಾಡಬೇಕು ಅದನ್ನು ಖಂಡಿತ ಮಾಡೇ ಮಾಡುತ್ತಾರೆ ಅನ್ನೋ ನಂಬಿಕೆ ನನಗಿದೆ. ನಾನೊಂದು ಸಮಾರಂಭಕ್ಕೆ ಹೋಗಿದ್ದೇ ಅಷ್ಟೇ. ನನ್ನನ್ನು ಗೌರವದಿಂದ ಕರೆದರು ಅದಕ್ಕೆ ಹೋದೆ. ಅಷ್ಟೇ ಗೌರವದಿಂದ ನಡೆಸಿಕೊಂಡರು. ಅದೇನಾಯ್ತು? ಎತ್ತಾಯ್ತು ಗೊತ್ತಿಲ್ಲ. ನಿನ್ನೆ ಬಂದಾಗ ಅವರು ಬೆಂಗಳೂರಿನಲ್ಲೇ ಇದ್ದರು. ಆಗಲೇ ಕೇಳಬಹುದಿತ್ತು. ಆದರೆ, ಏಕೆ ಕೇಳಲಿಲ್ಲ ಅನ್ನೋದು ನನಗೂ ಕೂಡ ಗೊತ್ತಿಲ್ಲ. ಕನ್ನಡ ಪ್ರೀತಿ ಅನ್ನೋದು ಯಾರೋ ಒಬ್ಬರು ಮಾತನಾಡಿದಾಗ ಬರಬಾರದು. ಸದಾ ಕನ್ನಡ ಇರಬೇಕು. ಏನೋ ಒಂದು ವಿವಾದ ಆದಾಗ ಮಾತ್ರ ಧ್ವನಿ ಎತ್ತುವುದಲ್ಲ, ಯಾವಾಗಲೂ ಕನ್ನಡವನ್ನು ಬೆಳೆಸಬೇಕು. ನಾವು ಕನ್ನಡಕ್ಕೋಸ್ಕರ ಹೋರಾಡುತ್ತೇವೆ ಮತ್ತು ಸಾಯುವುದಕ್ಕೂ ರೆಡಿ ಇದ್ದೇವೆ. ಬರೀ ಮಾತಲ್ಲಿ ಮಾತನಾಡಿ, ಮಾಧ್ಯಮದ ಮುಂದೆ ದೊಡ್ಡದಾಗಿ ಪೋಸ್​ ಕೊಡುವುದು ದೊಡ್ಡ ವಿಷಯವಲ್ಲ. ಕನ್ನಡಕ್ಕೆ ನಾವೇನು ಮಾಡುತ್ತಿದ್ದೇವೆ ಅನ್ನೋದನ್ನ ನೀವೇ ಹುಡುಕಿ ನೋಡಿ, ನಿಮಗೇ ಗೊತ್ತಾಗುತ್ತದೆ. ನೀವೇನು ಮಾಡುತ್ತಿದ್ದೀರಾ ಕನ್ನಡ ಸಿನಿಮಾಗಳಿಗೆ? ಕೇವಲ ಸ್ಟಾರ್​ ಸಿನಿಮಾಗಳಿಗೆ ಬೆಂಬಲ ನೀಡುವುದಲ್ಲ, ಹೊಸಬರಿಗೂ ಪ್ರೋತ್ಸಾಹ ಕೊಡಬೇಕು. ಆದರೆ, ಅದರ ಬಗ್ಗೆ ಮಾತನಾಡುವುದೇ ಇಲ್ಲ. ಕನ್ನಡ ಬೆಳೆಯುವುದು ನಮ್ಮ ಕೈಯಲ್ಲಿ. ದಯವಿಟ್ಟು ನಾನು ಹೇಳಿದ್ದನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಡಿ. ನಿಮ್ಮ ಮನಸ್ಸನ್ನು ನೀವೇ ಮುಟ್ಟಿ ನೋಡಿಕೊಳ್ಳಿ, ನಾವು ಮಾಡುತ್ತಿರುವುದು ಸರಿನಾ? ತಪ್ಪಾ? ಎಂದು ನಿಮಗೆ ಗೊತ್ತಾಗುತ್ತದೆ. ನಾನೇನು ಕಮಲ್​ ಹಾಸನ್​ ಬಗ್ಗೆ ಮಾತನಾಡಬೇಕಿಲ್ಲ. ಖಂಡಿತ ಅವರ ಗೊತ್ತಿರುತ್ತದೆ. ಅವರೊಬ್ಬ ಹಿರಿಯರು. ಸಾಕಷ್ಟು ಕನ್ನಡ ಸಿನಿಮಾಗಳನ್ನು ಸಹ ಮಾಡಿದ್ದಾರೆ. ಈ ಬೆಳವಣಿಗೆ ಬಗ್ಗೆ ಅರಿವಿದೆ. ಏನು ಮಾಡಬೇಕು ಅದನ್ನು ಮಾಡುತ್ತಾರೆ ಅನ್ನೋ ನಂಬಿಕೆ ಇದೆ ಎಂದು ಶಿವಣ್ಣ ಹೇಳಿದರು.

ಕ್ಷಮೆ ಕೇಳಲ್ಲ ಎಂದ ಕಮಲ್​

ವಿವಾದದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನಟ ಕಮಲ್ ಹಾಸನ್, ಪ್ರೀತಿಯಿಂದ ಮಾತನಾಡಿದ ವಿಷಯಕ್ಕೆ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ. ನಾನು ಪ್ರೀತಿಯಿಂದ ಹೇಳಿದ್ದು ಮತ್ತು ಅನೇಕ ಇತಿಹಾಸಕಾರರು ನನಗೆ ಭಾಷೆ, ಇತಿಹಾಸ ಕಲಿಸಿದ್ದಾರೆ. ನಾನು ಏನನ್ನೂ ಅರ್ಥೈಸಲಿಲ್ಲ ಎಂದಿದ್ದಾರೆ. ಭಾಷೆ ಬಗ್ಗೆ ಮಾತಾಡಲು ರಾಜಕಾರಣಿಗಳಿಗೆ ಅರ್ಹತೆ ಇಲ್ಲ. ಅನೇಕ ಇತಿಹಾಸಕಾರರು ನನಗೆ ಭಾಷಾ ಇತಿಹಾಸವನ್ನು ಕಲಿಸಿದ್ದಾರೆ. ತಮಿಳುನಾಡು ಒಂದು ವಿಶಾಲ ಹೃದಯ ರಾಜ್ಯ. ಒಬ್ಬ ಮೆನನ್ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಒಬ್ಬ ರೆಡ್ಡಿ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಒಬ್ಬ ತಮಿಳರು ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಒಬ್ಬ ಕನ್ನಡಿಗ ಅಯ್ಯಂಗಾರ್ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ನಾನು ಸಮಸ್ಯೆಗೆ ಸಿಲುಕಿದಾಗ ನನಗೆ ಬೆಂಬಲವಾಗಿ ಕನ್ನಡಿಗರು ನಿಂತಿದ್ರು. ಚೆನ್ನೈನಲ್ಲಿ ಸಮಸ್ಯೆ ಆದಾಗ ಕನ್ನಡಿಗರು ಸಪೋರ್ಟ್ ಮಾಡಿದ್ರು. ನನ್ನ ಸಿನಿಮಾಗಳನ್ನ ಅಭಿಮಾನಿಗಳು ನೋಡ್ತಾರೆ, ರಾಜಕಾರಣಿಗಳಿಗೆ ಭಾಷಾ ಜ್ಞಾನ ಇಲ್ಲ. ನನ್ನ ಪ್ರಕಾರ ನನ್ನ ಹೇಳಿಕೆ ಸರಿ ಇದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕನ್ನಡಪರ ಹೋರಾಟಗಾರರಿಂದ ಪ್ರತಿಭಟನೆ

ಕನ್ನಡದ ಬಗ್ಗೆ ಕಮಲ್​ ಹಾಸನ್​ ನೀಡಿರುವ ಹೇಳಿಕೆಯನ್ನು ಹಿಂಪಡೆದು, ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕೆಂದು ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಕನ್ನಡಕ್ಕೆ ತನ್ನದೇಯಾದ ಇತಿಹಾಸವಿದೆ. ಅಲ್ಲದೆ, ಕನ್ನಡ ಬಹಳ ಹಳೆಯ ಭಾಷೆಯಾಗಿದ್ದು, ತಮಿಳಿನಿಂದ ಹುಟ್ಟಿಕೊಂಡಿತು ಎಂಬುದನ್ನು ಒಪ್ಪುವುದಿಲ್ಲ. ಕಮಲ್​ ಹಾಸನ್​ ಅವರು ಇತಿಹಾಸವನ್ನು ತಿಳಿದುಕೊಂಡು ಮಾತನಾಡಲಿ. ಆದಷ್ಟು ಬೇಗ ತಮ್ಮ ಮಾತನ್ನು ಹಿಂಪಡೆದುಕೊಂಡು ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ್ದಾರೆ.

ಥಗ್​ ಲೈಗ್​ ಚಿತ್ರ ಬಿಡುಗಡೆಗೆ ಸಂಕಷ್ಟ

ಥಗ್​ ಲೈಫ್​ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜೂನ್​ 5ಕ್ಕೆ ಈ ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮುಂಚೆಯೇ ಕಮಲ್​ ಹಾಸನ್​ ಅವರು ಕನ್ನಡಿಗರನ್ನು ಕೆರಳಿಸಿದ್ದು, ಕರ್ನಾಟಕದಲ್ಲಿ ಥಗ್​ ಲೈಫ್​ ಸಿನಿಮಾ ಬಿಡುಗಡೆಗೆ ಸಂಕಷ್ಟ ಎದುರಾಗಿದೆ. ಕನ್ನಡಿಗರ ಕ್ಷಮೆಯನ್ನು ಕೋರದೇ ಹೋದಲ್ಲಿ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಥಗ್​ ಲೈಫ್​ ಸಿನಿಮಾ ಬಿಡುಗಡೆ ಮಾಡಲು ಅವಕಾಶವ ಕೊಡುವುದಿಲ್ಲ ಎಂದು ಕನ್ನಡಪರ ಹೋರಾಟಗಾರರು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಜನಪ್ರತಿನಿಧಿಗಳ ಆಕ್ರೋಶ

ಕಮಲ್​ ಹಾಸನ್​ ಹೇಳಿಕೆಗೆ ರಾಜ್ಯದ ರಾಜಕೀಯ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಕಮಲ್​ ಹಾಸನ್​ ಓರ್ವ ಉತ್ತಮ ನಟ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಕನ್ನಡ ಭಾಷೆಯ ಬಗ್ಗೆ ಅವರು ಮಾತನಾಡಿರುವುದು ಖಂಡನೀಯ. ಕನ್ನಡ ಭಾಷೆಗೆ ತನ್ನದೇಯಾದ ಇತಿಹಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಪ್ರತಿಪಕ್ಷದ ನಾಯಕ ಅಶೋಕ್​ ಮಾತನಾಡಿ, ಕಮಲ್​ ಹಾಸನ್​ ಅವರಿಗೆ ಕನ್ನಡದಲ್ಲೂ ಸಾಕಷ್ಟು ಅವಕಾಶಗಳನ್ನು ನೀಡಿದ್ದೇವೆ. ಅವರು ಈ ರೀತಿ ಮಾತನಾಡಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.

ದುರಭಿಮಾನ ಮೆರೆಯುವುದು ಸಂಸ್ಕೃತಿ ಹೀನ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಸುದೀರ್ಘವಾಗಿ ಬರೆಯುವ ಮೂಲಕ ಕಮಲ್​ ಹಾಸನ್​ ಅವರನ್ನು ಖಂಡಿಸಿದ್ದಾರೆ. ಮಾತೃಭಾಷೆಯನ್ನು ಪ್ರೀತಿಸಬೇಕು, ಆದರೆ ಅದರ ಹೆಸರಿನಲ್ಲಿ ದುರಭಿಮಾನ ಮೆರೆಯುವುದು ಸಂಸ್ಕೃತಿ ಹೀನ ನಡವಳಿಕೆಯಾಗುತ್ತದೆ. ಅದರಲ್ಲೂ ಕಲಾವಿದರಿಗೆ ಪ್ರತಿಯೊಂದು ಭಾಷೆಯನ್ನೂ ಗೌರವಿಸುವ ಸಂಸ್ಕಾರ ಇರಬೇಕು. ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ನಟಿಸಿರುವ ನಟ ಕಮಲ್​ ಹಾಸನ್​, ತಮ್ಮ ತಮಿಳು ಭಾಷೆಯನ್ನು ವೈಭವಿಕರಿಸುವ ಮತ್ತಿನಲ್ಲಿ ನಟ ಶಿವರಾಜ್ ಕುಮಾರ್ ಅವರನ್ನೂ ಕುಳ್ಳಿರಿಸಿಕೊಂಡು ಕನ್ನಡವನ್ನು ಅವಮಾನಿಸಿರುವುದು ಉದ್ಧಟತನ ಹಾಗೂ ದುರಹಂಕಾರದ ಪರಮಾವಧಿಯಾಗಿದೆ. ಭಾರತವೂ ಸೇರಿದಂತೆ ವಿಶ್ವದ ಹತ್ತು -ಹಲವು ಕಡೆಗಳಲ್ಲಿ ಕನ್ನಡದ ಹೆಗ್ಗುರುತು ಶತಾಶತಮಾನಗಳಿಂದಲೂ ಪಡಿಮೂಡಿದೆ. ಜಗತ್ತಿನ ಭಾಷೆಗಳಲ್ಲಿ ಕನ್ನಡಕ್ಕೆ ಸರ್ವ ಶ್ರೇಷ್ಠ ಮಾನ್ಯತೆ ಇದೆ ಎಂಬ ಕನಿಷ್ಠ ತಿಳುವಳಿಕೆ ಕಮಲ್ ಹಾಸನ್ ರಂತಹ ಸಂಕುಚಿತ ವ್ಯಕ್ತಿತ್ವವಿರುವ ದುರಾಭಿಮಾನಿ ವ್ಯಕ್ತಿಗಳಿಗೆ ತಿಳಿದಿರಲಿ. ಕನ್ನಡವನ್ನು ಅವಹೇಳನ ಮಾಡುವ ಮುನ್ನ ಕನ್ನಡ ಚಿತ್ರಗಳಲ್ಲೂ ನಟಿಸಿರುವ ಕಮಲ್ ಹಾಸನ್ ಕನ್ನಡ,ಕನ್ನಡಿಗರ ಋಣ ತಮ್ಮ ಮೇಲಿದೆ ಎಂಬ ಔದಾರ್ಯತೆಯನ್ನು ಮರೆತಿದ್ದು ಅವರ ಉಪಕಾರ ಸ್ಮರಣೆಯಿಲ್ಲದ ವ್ಯಕ್ತಿತ್ವವನ್ನು ಅನಾವರಣಗೊಳಿಸಿದೆ. ದಕ್ಷಿಣ ಭಾರತದಲ್ಲಿ ಸಾಮರಸ್ಯತೆಯನ್ನು ಬೆಸೆಯಬೇಕಾದ ಕಮಲ್ ಹಾಸನ್ ಅವರು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಾ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುತ್ತಿದ್ದರು. ಇದೀಗ ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನಕ್ಕೆ ಕೊಳ್ಳಿಯಿಟ್ಟು ಕನ್ನಡವನ್ನು ಅಪಮಾನಿಸಿದ್ದಾರೆ. ಈ ಕೂಡಲೇ ಕಮಲ್ ಹಾಸನ್ ಅವರು ಈ ಕೂಡಲೇ ಬೇಷರತ್ ಕನ್ನಡಿಗರ ಕ್ಷಮೆ ಕೇಳಬೇಕು. ಯಾವ ಭಾಷೆಯಿಂದ ಯಾವ ಭಾಷೆ ಹುಟ್ಟಿತು ಎಂಬುದನ್ನು ವ್ಯಾಖ್ಯಾನಿಸಲು ಕಮಲ್ ಹಾಸನ್ ಇತಿಹಾಸ ತಜ್ಞರೇನೂ ಅಲ್ಲ. ಆದರೆ ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಕನ್ನಡ ಭಾಷೆ ಭಾರತದ ಭೂಪಟದಲ್ಲಿ ಸಮೃದ್ಧತೆಯನ್ನು ಸಂಕೇತಿಸುತ್ತದೆ, ಸೌಹಾರ್ದತೆಯನ್ನು ಪ್ರತಿನಿಧಿಸುತ್ತಿದೆ. ಕನ್ನಡಿಗರು ಭಾಷಾ ದ್ವೇಷಿಗಳಲ್ಲ, ಆದರೆ ಕನ್ನಡ ನಾಡು, ನುಡಿ, ಜನ, ಜಲ, ವಿಚಾರಗಳು ಬಂದಾಗ ಸ್ವಾಭಿಮಾನವನ್ನು ಎಂದಿಗೂ ಬಲಿ ಕೊಟ್ಟಿಲ್ಲ ಎಂಬ ಸತ್ಯ ವಿವೇಕ ಸುಟ್ಟುಕೊಂಡವರಂತೆ ಮಾತನಾಡಿರುವ ಕಮಲ್ ಹಾಸನ್ ಅವರಿಗೆ ನೆನಪಿರಲಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net