

ಪ್ರತಿಯೊಂದು ಭಾಷೆಗೂ ತನ್ನದೇ ಆದ ಸೊಗಡು, ಮಹತ್ವ, ಭವ್ಯ ಇತಿಹಾಸ ಮತ್ತು ಸುಂದರ ವರ್ತಮಾನ ಇದೆ. ಅದರಲ್ಲೂ ಕನ್ನಡ ಪ್ರಾಚೀನ ಭಾಷೆ ಆಗಿರುವುದರಿಂದಲೇ ಶಾಸ್ತ್ರೀಯ ಭಾಷೆ ಮನ್ನಣೆಯ ಗರಿಯನ್ನು ಅಲಂಕರಿಸಿಕೊಂಡಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅಮೋಘ ಸಾಧನೆಗಾಗಿ 8 ಜ್ಞಾನಪೀಠ ಪ್ರಶಸ್ತಿಗಳನ್ನು ಮತ್ತು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಅಲ್ಲದೆ, ಕನ್ನಡಿಗರು ಭಾಷೆಯ ಬಗ್ಗೆ ಅಭಿಮಾನ ಹೊಂದಿ, ರಚನಾತ್ಮಕ, ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆಯೇ ಹೊರತು ದುರಾಭಿಮಾನ ಬೆಳೆಸಿಕೊಂಡಿಲ್ಲ. ಹಾಗಂತ ಕನ್ನಡಿಗರ ತಾಳ್ಮೆ, ಸ್ವಾಭಿಮಾನವನ್ನು ಕೆಣಕುವ ದುಸ್ಸಾಹಸಕ್ಕೆ ಯಾರೂ ಕೈಹಾಕಬಾರದು.
ಅಷ್ಟಕ್ಕೂ ಕಲಾವಿದರೆನಿಸಿಕೊಂಡವರು ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಬೇಕೆ ಹೊರತು ಮನಸ್ಸುಗಳನ್ನು ವಿಭಜಿಸಬಾರದು. ಅದರಲ್ಲೂ, ಇತ್ತೀಚಿನ ದಿನಗಳಲ್ಲಿ ಪ್ರಚಾರದ ವ್ಯಾಮೋಹದಿಂದಲೋ ಅಥವಾ ಯಾರನ್ನೋ ಮೆಚ್ಚಿಸುವ ಭರದಲ್ಲೋ ಜವಾಬ್ದಾರಿ ಸ್ಥಾನದಲ್ಲಿ ಇರುವವರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಖ್ಯಾತ ಚಿತ್ರನಟ ಕಮಲ್ ಹಾಸನ್ ‘ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು’ ಎಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು, ಅವರ ಈ ಬೇಜವಾಬ್ದಾರಿ ಮತ್ತು ತರ್ಕಹೀನ ಮಾತು ರಾಜ್ಯದಲ್ಲಿ ಆಕ್ರೋಶದ ಅಲೆಯನ್ನೇ ಹುಟ್ಟುಹಾಕಿದೆ. ‘ಕನ್ನಡಕ್ಕೆ ದೀರ್ಘ ಕಾಲದ ಇತಿಹಾಸವಿದೆ. ಪಾಪ, ಕಮಲ್ ಹಾಸನ್ ಅವರಿಗೆ ಗೊತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕಮಲ್ ಹಾಸನ್ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ, ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಅವರ ಹೇಳಿಕೆಯನ್ನು ಖಂಡಿಸಿ ಬುಧವಾರ ರಾಜ್ಯದ ಹಲವೆಡೆ ಪ್ರತಿಭಟನೆಯನ್ನೂ ನಡೆಸಲಾಗಿದೆ.
ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿರುವ, ಕರ್ನಾಟಕಕ್ಕೆ ಆಗಾಗ ಭೇಟಿ ನೀಡುತ್ತಲೇ ಇರುವ ಮತ್ತು ಇಲ್ಲಿನ ಕಲಾವಿದರೊಂದಿಗೆ ಸ್ನೇಹವನ್ನೂ ಹೊಂದಿರುವ ಕಮಲ್ ಹಾಸನ್ ಕನ್ನಡದ ಬಗ್ಗೆ ಪ್ರೀತಿ, ಗೌರವವನ್ನು ತೋರುವ ಮಾತುಗಳನ್ನು ಆಡುವ ಬದಲಿಗೆ ಅಸಂಬದ್ಧ ಹೇಳಿಕೆಯನ್ನು ನೀಡಿರುವುದು ಖಂಡನಾರ್ಹ. ಇತಿಹಾಸದ ಬಗ್ಗೆ ಅವರಿಗೆ ಸ್ಪಷ್ಟ ಅರಿವು ಇಲ್ಲದಿರುವುದು, ಕನ್ನಡದ ಹಿರಿಮೆ-ಗರಿಮೆ, ಕೊಡುಗೆ ಗೊತ್ತಿಲ್ಲದಿರುವುದು ಈ ಘಟನೆಯಿಂದ ಸ್ಪಷ್ಟವಾಗಿದೆ. ಹಾಗಾಗಿ, ಕನ್ನಡಿಗರ ಆಕ್ರೋಶ ನ್ಯಾಯಯುತವಾಗಿಯೇ ಇದೆ.
ಜವಾಬ್ದಾರಿ ಸ್ಥಾನದಲ್ಲಿ ಇರುವವರು ತಾವು ಆಡುವ ಮಾತು ಮತ್ತು ಅವು ಬೀರುವ ಪರಿಣಾಮದ ಬಗ್ಗೆ ಹತ್ತು ಬಾರಿ ಯೋಚನೆ ಮಾಡಬೇಕು. ಗಾಯಕ ಸೋನು ನಿಗಮ್ ಕನ್ನಡ ಗೀತೆ ಹಾಡಲು ಅಭಿಮಾನಿಯೊಬ್ಬರು ಒತ್ತಾಯಿಸಿದಾಗ, ಆ ಗಾಯಕ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ. ಈ ಸಂಬಂಧ ಪ್ರಕರಣವೀಗ ನ್ಯಾಯಾಲಯದಲ್ಲಿದೆ. ಬೆಂಗಳೂರಿನ ಎಸ್ಬಿಐ ಮ್ಯಾನೇಜರ್ ಒಬ್ಬರು ಇತ್ತೀಚೆಗೆ ‘ನಾನು ಯಾವುದೇ ಕಾರಣಕ್ಕೂ ಕನ್ನಡ ಮಾತನಾಡುವುದಿಲ್ಲ’ ಎಂದು ಸಾರ್ವಜನಿಕವಾಗಿಯೇ ಧಾರ್ಷ್ಟ್ಯ ತೋರಿದ್ದರು. ಇದೆಲ್ಲ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಪ್ರಯತ್ನಗಳು. ಕನ್ನಡಿಗರು ತಮ್ಮ ಭಾಷೆಯನ್ನು ಪ್ರೀತಿಸುತ್ತ, ಇತರ ಭಾಷೆಯವರಿಗೂ ಈ ರಾಜ್ಯದಲ್ಲಿ ಬದುಕು ಕಟ್ಟಿಕೊಳ್ಳಲು ಸೌಹಾರ್ದ ವಾತಾವರಣ ನಿರ್ವಿುಸಿಕೊಟ್ಟಿದ್ದಾರೆ. ಅದು ಕನ್ನಡಿಗರ ಹೃದಯ ವೈಶಾಲ್ಯತೆ. ಆದರೆ ಯಾರಾದರೂ ಅದನ್ನು ಕನ್ನಡಿಗರ ದೌರ್ಬಲ್ಯ ಎಂದು ಭಾವಿಸಿದರೆ ಅದು ಮೂರ್ಖತನ.
ಕಮಲ್ ಹಾಸನ್ ನಟ ಮಾತ್ರವಲ್ಲ ರಾಜಕಾರಣಿಯೂ ಹೌದು. ಅವರೀಗ ದೇಶದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆ ಪ್ರವೇಶಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ, ರಾಜಕೀಯ ಒಲೈಕೆಗಾಗಿ ಏನಾದರೂ ಮಾತಾಡಬಹುದು, ಇತರ ಭಾಷೆ, ಭಾಷಿಕರನ್ನು ಹೀಯಾಳಿಸಬಹುದು ಎಂದು ಕಮಲ್ ಭಾವಿಸಿದ್ದರೆ ಅದು ದೊಡ್ಡ ತಪು್ಪ. ಈ ನಟನ ಹೇಳಿಕೆಯನ್ನು ಕನ್ನಡಿಗರು ಒಗ್ಗಟ್ಟಾಗಿ ಖಂಡಿಸಿದ್ದು, ತಮ್ಮ ಹೇಳಿಕೆಗಾಗಿ ಕಮಲ್ ಹಾಸನ್ ವಿಳಂಬ ಮಾಡದೆ ಬೇಷರತ್ ಆಗಿ ಕ್ಷಮೆ ಯಾಚಿಸಬೇಕು.