

ಬೆಂಗಳೂರು: ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ ಸಲಾರ್ ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಪೋಷಕ ಕಲಾವಿದರ ಆಯ್ಕೆಯ ಕುರಿತು ಸುದ್ದಿಯಾಗುತ್ತಿದ್ದಂತೆ ಇದೀಗ ಚಿತ್ರದ ಮತ್ತೊಂದು ಸಸ್ಪೆನ್ಸ್ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಅದೇನೆಂದರೆ ಸಲಾರ್ ಚಿತ್ರದಲ್ಲಿ ಶರ್ಟ್ಲೆಸ್ ಆ್ಯಕ್ಷನ್ ದೃಶ್ಯಗಳಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರಂತೆ.
ಇದನ್ನೂ ಓದಿ: ಕಂಗನಾ ಬಾಡಿಗಾರ್ಡ್ ಮೇಲೆ ಅತ್ಯಾಚಾರ ಆರೋಪ
ಸದ್ಯ ಇಂಥದ್ದೊಂದು ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆಯಾದರೂ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಗಳು ಹೊರಬಂದಿಲ್ಲ. ಬದಲಿಗೆ ಈಗಾಗಲೇ ಸಿಕ್ಸ್ ಪ್ಯಾಕ್ ಸಲುವಾಗಿ ಪ್ರಭಾಸ್ ಹೆವಿ ವರ್ಕೌಟ್ ಮಾಡುತ್ತಿದ್ದಾರೆ. ದೇಹವನ್ನು ಮತ್ತೆ ಹುರಿಗೊಳಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಪ್ರಭಾಸ್ ಇದೇ ಮೊದಲ ಬಾರಿ ಶರ್ಟ್ಲೆಸ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬಾಹುಬಲಿ ಸೇರಿ ಹಲವು ಸಿನಿಮಾಗಳಲ್ಲಿ ತಮ್ಮ ಬೇರ್ ಬಾಡಿ ಪ್ರದರ್ಶಿಸಿದ್ದಾರೆ. ಇದೀಗ ಆ ಪ್ರದರ್ಶನ ಸಲಾರ್ನಲ್ಲಿಯೂ ಮುಂದುವರಿಯಲಿದೆಯಂತೆ.
ಇತ್ತ ಪ್ರಭಾಸ್ ಸದ್ಯ ನಾಲ್ಕು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಪೈಕಿ ಜು.30ಕ್ಕೆ ಬಿಡುಗಡೆ ಆಗಬೇಕಿದ್ದ ‘ರಾಧೆ ಶ್ಯಾಮ್’ ಚಿತ್ರ ಕರೊನಾದಿಂದ ಮುಂದೂಡಲ್ಪಟ್ಟಿದೆ. ಈ ನಡುವೆ ಬಾಲಿವುಡ್‌ನಲ್ಲಿ ತಯಾರಾಗುತ್ತಿರುವ ‘ಆದಿಪುರುಷ್’ ಚಿತ್ರದಲ್ಲಿಯೂ ಪ್ರಭಾಸ್ ಭಾಗವಹಿಸಬೇಕಿದೆ. ನಾಗ್ ಅಶ್ವಿನ್ ನಿರ್ದೇಶನದ ಚಿತ್ರವೂ ಸೆಟ್ಟೇರಲಿದೆ. ಇತ್ತ ‘ಸಲಾರ್’ ಚಿತ್ರ 2022 ಏಪ್ರಿಲ್ 14ಕ್ಕೆ ತೆರೆಗೆ ಬರಲಿದೆ. ‘ಸಲಾರ್’ಗೆ ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ, ಶಿವಕುಮಾರ್ ಅವರ ಕಲಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ.