ಕಾಸ್ಟ್ಲಿ ಪ್ರಭಾಸ್!; ಒಂದು ಚಿತ್ರಕ್ಕೆ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ..

Costly
Published on

ಗಂಡಸರ ಸಂಬಳ ಕೇಳಬಾರದು, ಹೆಂಗಸರ ವಯಸ್ಸು ಕೇಳಬಾರದು ಎಂಬ ಜನಪ್ರಿಯ ನಾಣ್ಣುಡಿ ಇದೆ. ಆದರೆ, ಚಿತ್ರರಂಗಕ್ಕೆ ಈ ಮಾತು ಅನ್ವಯವಾಗುವುದಿಲ್ಲ. ಪದೇಪದೆ ಹೀರೋಗಳ ಸಂಭಾವನೆಯ ಬಗ್ಗೆ, ಹೀರೋಯಿನ್​ಗಳ ವಯಸ್ಸಿನ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ. ಇಬ್ಬರೂ ತಮ್ಮ ಸಂಭಾವನೆ ಮತ್ತು ವಯಸ್ಸಿನ ಬಗ್ಗೆ ಹೇಳಿಕೊಳ್ಳದಿದ್ದರೂ, ಅದೇನೋ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯಾಗುತ್ತಲೇ ಇರುತ್ತದೆ. ಅದರಲ್ಲೂ ಯಾವ ಹೀರೋ, ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಕುತೂಹಲ ಇಂದು, ನಿನ್ನೆಯದಲ್ಲ. ಕೆಲವು ವರ್ಷಗಳ ಹಿಂದೆ, ಇಡೀ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರೆಂದರೆ ಅದು ರಜನಿಕಾಂತ್ ಎಂದು ಹೇಳಲಾಗುತ್ತಿತ್ತು. 10-15 ವರ್ಷಗಳ ಹಿಂದೆಯೇ ರಜನಿಕಾಂತ್, 40 ಕೋಟಿಯವರೆಗೂ ಸಂಭಾವನೆ ಪಡೆಯುತ್ತಾರೆ ಮತ್ತು ಈ ಮೂಲಕ ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಹೇಳಲಾಗಿತ್ತು.

ಆದರೆ, ರಜನಿಕಾಂತ್ ಅವರ ಈ ದಾಖಲೆ ಅಥವಾ ಹೆಗ್ಗಳಿಕೆ ಪುಡಿಪುಡಿಯಾಗಿದೆ. ಆ ಕಾಲಕ್ಕೆ ರಜನಿಕಾಂತ್ ಏನು ಸಂಭಾವನೆ ಪಡೆಯುತ್ತಿದ್ದರು, ಈ ಕಾಲಕ್ಕೆ ಅದು ಮೂರು ಪಟ್ಟು ಹೆಚ್ಚಾಗಿದೆ ಎಂಬುದು ವಿಶೇಷ. ಮೂಲಗಳ ಪ್ರಕಾರ, ಭಾರತದಲ್ಲಿ ಸದ್ಯಕ್ಕೆ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರೆಂದರೆ ಅದು ‘ಬಾಹುಬಲಿ’ ಖ್ಯಾತಿಯ ಪ್ರಭಾಸ್. ‘ಸ್ಪಿರಿಟ್’ ಎಂಬ ಚಿತ್ರಕ್ಕೆ ಪ್ರಭಾಸ್ 150 ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ಹೇಳಲಾಗಿದ್ದು, ಭಾರತದ ಕಾಸ್ಟಿ ್ಲ ನಟ ಎಂಬ ಹೆಗ್ಗಳಿಕೆಗೆ ಪ್ರಭಾಸ್ ಪಾತ್ರರಾಗಿದ್ದಾರೆ. ‘ಬಾಹುಬಲಿ’ ನಂತರ ಬಹುಕೋಟಿ ವೆಚ್ಚ ಚಿತ್ರಗಳಲ್ಲೇ ನಟಿಸುತ್ತಿರುವ ಪ್ರಭಾಸ್, ಚಿತ್ರಗಳ ಬಜೆಟ್​ಗೆ ತಕ್ಕ ಹಾಗೆ ತಮ್ಮ ಸಂಭಾವನೆಯನ್ನು ಏರಿಸಿಕೊಳ್ಳುತ್ತಲೇ ಇದ್ದಾರೆ. ‘ರಾಧೆ ಶ್ಯಾಮ್, ‘ಸಲಾರ್’, ‘ಆದಿಪುರುಷ್’ ಮತ್ತು ‘ಪ್ರಾಜೆಕ್ಟ್ ಕೆ’ ಚಿತ್ರಗಳಲ್ಲಿ ಪ್ರಭಾಸ್ ನಟಿಸಿದ್ದು, ಈ ಚಿತ್ರಗಳಿಗೆ ಅವರು 100 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ. ಈಗ ‘ಸ್ಪಿರಿಟ್’ ಎಂಬ ಹೊಸ ಚಿತ್ರವನ್ನು ಅವರು ಒಪ್ಪಿದ್ದು, ಆ ಚಿತ್ರಕ್ಕಾಗಿ 150 ಕೋಟಿ ಪಡೆಯುತ್ತಿದ್ದಾರಂತೆ. ವಿಶೇಷವೆಂದರೆ, ಇದು ಅವರ 25ನೇ ಚಿತ್ರವಾಗಿದೆ. ಸಂಭಾವನೆ ವಿಷಯದಲ್ಲಿ ಪ್ರಭಾಸ್​ಗೆ

ಸ್ಪರ್ಧಿ ಎಂದರೆ ಅದು ಸಲ್ಮಾನ್ ಖಾನ್. ಚಿತ್ರವೊಂದಕ್ಕೆ 100 ಕೋಟಿ ರೂ.ವರೆಗೂ ಪಡೆಯುತ್ತಿದ್ದ ಸಲ್ಮಾನ್ ಖಾನ್, ‘ಕಭಿ ದಿವಾಲಿ ಕಭಿ ಈದ್’ ಎಂಬ ಚಿತ್ರಕ್ಕೆ 150 ಕೋಟಿ ಸಂಭಾವನೆಯ ಬೇಡಿಕೆ ಇಟ್ಟಿದ್ದರಂತೆ. ಆದರೆ, ಕೋವಿಡ್ ಕಾಲದಲ್ಲಿ ನಿರ್ವಪಕರ ಕಷ್ಟ ಅರ್ಥ ಮಾಡಿಕೊಂಡು, ತಮ್ಮ ಸಂಭಾವನೆಯಲ್ಲಿ ಡಿಸ್ಕೌಂಟ್ ಕೊಟ್ಟಿದ್ದಾರೆ ಎಂಬ ಸುದ್ದಿ ಇದೆ. ಆದರೂ ಸಲ್ಮಾನ್ ಖಾನ್ ಆ ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ 125 ಕೋಟಿ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿದೆ. ಮೂರನೆಯ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಇದ್ದು, ಅವರು ಇತ್ತೀಚಿನ ಚಿತ್ರಗಳಿಗೆ 100ರಿಂದ 115 ಕೋಟಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ನಾಲ್ಕನೆಯ ಸ್ಥಾನದಲ್ಲಿ ಆಮೀರ್ ಖಾನ್ ಮತ್ತು ತಮಿಳು ನಟ ವಿಜಯ್ ಇದ್ದು, ಇಬ್ಬರೂ 80 ಕೋಟಿಯವರೆಗೂ ಸಂಭಾವನೆ ಪಡೆಯುತ್ತಾರಂತೆ. ಐದನೇ ಸ್ಥಾನದಲ್ಲಿ ಶಾರೂಖ್ ಖಾನ್ ಇದ್ದು ಚಿತ್ರವೊಂದಕ್ಕೆ 50 ಕೋಟಿ ಸಂಭಾವನೆ ಪ್ಲಸ್ ಲಾಭದಲ್ಲಿ ಒಂದು ಭಾಗವನ್ನೂ ಕೇಳುತ್ತಾರಂತೆ. ಲಾಭದಲ್ಲಿ ಶೇರ್ ಪಡೆಯುವುದು ಅವರೊಬ್ಬರೇ ಅಲ್ಲ, ಟಾಪ್ ನಾಲ್ಕರಲ್ಲಿರುವ ಸ್ಟಾರ್ ನಟರು ಸಹ ನಿರ್ವಪಕರಿಗೆ ತೊಂದರೆಯಾಗದಂತೆ ಒಂದಂಶ ಪಡೆಯುತ್ತಾರೆ ಎಂಬ ಸುದ್ದಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net