

ಬೆಂಗಳೂರು: ನಟ ನೀನಾಸಂ ಸತೀಶ್ ಈ ಸಲ ಮಕರ ಸಂಕ್ರಾಂತಿಯ ಶುಭಾಶಯವನ್ನು ವಿಶೇಷ ರೀತಿಯಲ್ಲಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ಸಂಕ್ರಮಣದ ಸಂಭ್ರಮದ ಜತೆಗೆ ಮತ್ತೊಂದು ಸಂತೋಷವನ್ನು ಕೂಡ ಹಂಚಿಕೊಂಡಿದ್ದಾರೆ.
ನಟ ನೀನಾಸಂ ಸತೀಶ್ ಇದೇ ಮೊದಲ ಸಲ ತಮ್ಮ ಪುತ್ರಿಯ ಫೋಟೋವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಷ್ಟೇ ಅಲ್ಲದೆ, ಮಗಳ ಮುಖೇನ ಸಂಕ್ರಾಂತಿಯ ಶುಭಾಯಶವನ್ನು ಕೋರಿದ್ದಾರೆ. ಅವರ ಪುತ್ರಿಗೆ ಇದೀಗ ಐದು ವರ್ಷ ತುಂಬಿದ್ದರೂ ಅವರು ಇದುವರೆಗೂ ಆಕೆಯ ಫೋಟೋ ಎಲ್ಲಿಯೂ ಸಾರ್ವಜನಿಕವಾಗಿ, ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರಲಿಲ್ಲ. ಆದರೆ ಸಂಕ್ರಾಂತಿಯ ಈ ದಿನ ಆಕೆಯ ಫೋಟೋ ಹಂಚಿಕೊಂಡು ಅದಕ್ಕೆ ವಿವರಣೆಯನ್ನೂ ನೀಡಿದ್ದಾರೆ.
"ನಿಮಗೆಲ್ಲ ಸಂಕ್ರಾಂತಿ ಶುಭಾಶಯ ಕೋರುತ್ತಿದ್ದಾಳೆ, ನನ್ನ ಮಗಳು "ಮನಸ್ವಿತ". ಇದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವ ಅವಳ ಮೊದಲ ಚಿತ್ರ. ಅವಳ ಪ್ರೈವೆಸಿಯ ಕಾರಣದಿಂದ ಇದುವರೆಗೂ ನಮ್ಮ ಕುಟುಂಬ, ಯಾವ ಚಿತ್ರಗಳನ್ನೂ ಹಂಚಿಕೊಂಡಿಲ್ಲ. ಅಭಿಮಾನಿಗಳು ಮತ್ತು ಸ್ನೇಹಿತರು ನನ್ನ ಮಗಳ ಚಿತ್ರ ಹಂಚಿಕೊಳ್ಳುವಂತೆ ಕೇಳಿಕೊಂಡ ಕಾರಣ ಈ ಚಿತ್ರ ಹಾಕುತ್ತಿರುವೆ. ನಮ್ಮ ಕುಟುಂಬದ ಮೇಲೆ ನಿಮ್ಮ ಪ್ರೀತಿ ಹಾರೈಕೆ ಎಂದಿನಂತೆ ಸದಾ ಇರಲಿ.
(ಇದು ಅವಳ ಮೊದಲ ವರ್ಷ ತೆಗೆದ ಚಿತ್ರ, ಈಗ ಅವಳು 5ತುಂಬಿ 6ರ ಹೆಜ್ಜೆ ಇಡುತ್ತಿದ್ದಾಳೆ.)
ಧನ್ಯವಾದಗಳೊಂದಿಗೆ,
ಸುಪ್ರೀತಾ, ಮನಸ್ವಿತ, ಸತೀಶ್.." ಎಂಬುದಾಗಿ ಮಗಳ ಫೋಟೋ ಜತೆಗೆ ಸತೀಶ್ ಹೇಳಿಕೊಂಡಿದ್ದಾರೆ.