ಕೋಮಲ್​ ಹಲವು ಅವತಾರಗಳು : ಭಿನ್ನ, ವಿಭಿನ್ನ ಜಾನರ್​ಗಳಲ್ಲಿ ಮಿಂಚಲು ರೆಡಿಯಾದ ನಟ

111
Published on

| ಹರ್ಷವರ್ಧನ್​ ಬ್ಯಾಡನೂರು

ಆರೇಳು ವರ್ಷಗಳ ಗ್ಯಾಪ್​ ಪಡೆದು "ಉಂಡೆನಾಮ' ಚಿತ್ರದ ಮೂಲಕ ವಾಪಸ್ಸಾದವರು ನಟ ಕೋಮಲ್​ ಕುಮಾರ್​. ಇದೀಗ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬಿಜಿ. ವಿಶೇಷ ಅಂದರೆ ಪ್ರತಿ ಚಿತ್ರವೂ ಒಂದೊಂದು ಜಾನರ್​ಗೆ ಸೇರಿವೆ. ಚಿತ್ರಗಳು, ಪಾತ್ರಗಳು, ಮುಂದಿನ ಯೋಜನೆಯ ಕುರಿತು ವಿಜಯವಾಣಿ ಜತೆ ಕೋಮಲ್​ ಮುಕ್ತವಾಗಿ ಮಾತನಾಡಿದ್ದಾರೆ.

  • ಈಗ ಯಾವೆಲ್ಲ ಸಿನಿಮಾಗಳಲ್ಲಿ ನಟಿಸುತ್ತಿದ್ದೀರಿ?
    "ನಮೋ ಭೂತಾತ್ಮ 2', "ಕಾಲಾಯನಮ@', "ಯಲಾ ಕುನ್ನಿ', "ರೋಲೆಕ್ಸ್​', ಟೈಟಲ್​ ಇಡದ ರೋಬೋ ಕುರಿತ ಸಿನಿಮಾ ಜತೆಗೆ ಇನ್ನೂ ಎರಡು ಚಿತ್ರಗಳ ಕಥೆ ಒಪ್ಪಿದ್ದೇನೆ. "ನಮೋ ಭೂತಾತ್ಮ 2' ರಿಲೀಸ್​ ಆದ ನಂತರ, ನಾನು ನಟಿಸಿ, ನಿರ್ಮಿಸಿರುವ "ಕಾಲಾಯನಮ@' ಬಿಡುಗಡೆಯಾಗಲಿದೆ. ಬಿಲ್ಡಪ್​ ಸಿನಿಮಾಗಳು ವರ್ಕ್​ ಆಗುತ್ತಿಲ್ಲ. ಕಂಟೆಂಟ್​ ಸಿನಿಮಾಗಳ ಸಮಯವಿದು. ಹೊಸ ಬಗೆಯ ವಿಷಯಗಳನ್ನು ಹುಡುಕಿ, ಬೇರೆ ಬೇರೆ ಜಾನರ್​ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ.
  • "ನಮೋ ಭೂತಾತ್ಮ' ಚಿತ್ರಕ್ಕೂ ಈ ಸೀಕ್ವಲ್​ಗೂ ಲಿಂಕ್​ ಇದೆಯೇ?
    "ನಮೋ ಭೂತಾತ್ಮ' ತಮಿಳು ಚಿತ್ರದ ರಿಮೇಕ್​ ಆಗಿತ್ತು. ಕನ್ನಡದಲ್ಲಿ ನಾವು ಹಲವು ಬದಲಾವಣೆ ಮಾಡಿಕೊಂಡಿದ್ದೆವು. 2015ರಲ್ಲಿ ಮೊದಲ ಭಾಗ ರಿಲೀಸ್​ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಹಾರರ್​ ಕಾಮಿಡಿ ಸಿನಿಮಾಗಳು ಬಂದಿಲ್ಲ. ನಿರ್ದೇಶಕ ಮುರಳಿ ಮಾಸ್ಟರ್​ "ನಮೋ ಭೂತಾತ್ಮ 2' ಕಥೆ ಮಾಡಿದ್ದಾರೆ. ಅದೇ ಬೇರೆ ಕಥೆ, ಇದೇ ಬೇರೆ ಕಥೆ. ಹಾರರ್​ಗಿಂತ ಕಾಮಿಡಿ ಜಾಸ್ತಿಯಿದೆ. ಕಥೆ, ಚಿತ್ರಕಥೆ ಎರಡೂ ಯಾರೂ ನಿರೀಸಿದ ರೀತಿ ಇರಲಿದೆ.
  • ನಿಮ್ಮ ಪಾತ್ರ ಹೇಗಿರಲಿದೆ?
    ನಾನಿಲ್ಲಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುವ ವ್ಯಕ್ತಿ. ಒಂದು ಪ್ರೋಗ್ರಾಂ ಮಾಡಲು ಯಾವುದೋ ಲೊಕೇಷನ್​ಗೆ ಹೋದಾಗ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎಂಬುದು ಚಿತ್ರದ ಕಥೆ. ಹಾರರ್​ ಮತ್ತು ಕಾಮಿಡಿ ಜಾನರ್​ ಒಂದು ನಾಣ್ಯದ ಎರಡು ಮುಖಗಳಂತೆ, ಒಮ್ಮೆ ನಗಿಸಿದರೆ, ಮತ್ತೊಮ್ಮೆ ಹೆದರಿಸುತ್ತದೆ. ಡಬ್ಬಿಂಗ್​ ಸಮಯದಲ್ಲಿ ಸಿನಿಮಾ ನೋಡಿದ್ದೇನೆ. ಕಲಾವಿದನಾಗಿ ನನಗೆ ತೃಪ್ತಿ ನೀಡಿದ ಚಿತ್ರ.
  • ನೀವು ದೆವ್ವ, ಭೂತಗಳನ್ನು ನಂಬುತ್ತೀರಾ?
    ಇಲ್ಲ ನಂಬುದವುದಿಲ್ಲ. ಅದೆಲ್ಲ ನೆಗಟಿವ್​ ಎನರ್ಜಿ, ಪಾಸಿಟಿವ್​ ಎನರ್ಜಿ ಅಷ್ಟೇ. ನಾವು ಪೂಜೆ ಮಾಡುವುದೇ ಭೈರವನನ್ನು. ಪ್ರತಿ ಅಮಾವಾಸ್ಯೆಯಲ್ಲಿ ನಮ್ಮ ಊರಿನ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. ನಾನು ಬೆಳಗ್ಗೆ 3 ಗಂಟೆಗೆ ಎದ್ದು ಹೋಗುತ್ತೇನೆ.
  • ಒಟಿಟಿ ಬಂದು ಚಿತ್ರರಂಗಕ್ಕೆ ಸಹಾಯವಾಗಿದೆಯಲ್ಲವೇ?
    ಹೌದು, ಎರಡು ಕಥೆಗಳು ನನಗೂ ಬಂದಿವೆ. ಒಟಿಟಿ ವೇದಿಕೆಗಳ ಜತೆ ಮಾತುಕತೆ ನಡೆಯುತ್ತಿದೆ. ಆದರೆ, ನನಗೆ ವೆಬ್​ಸರಣಿ ಅಂದರೆ ಅಷ್ಟಕ್ಕಷ್ಟೇ. ಎಲ್ಲ ಸಿನಿಮಾಗಳನ್ನೂ ಥಿಯೇಟರ್​ಗಳಲ್ಲಿ ರಿಲೀಸ್​ ಮಾಡಲಾಗುವುದಿಲ್ಲ. ಒಟಿಟಿ ಮೂಲಕ ಹೇಳುವಂತಹ ಕಥೆಗಳೇ ಇರುತ್ತವೆ. ನನ್ನ ಬಳಿ ಅಂತಹ ಹಲವಾರು ಕಥೆಗಳಿವೆ. ಒಟಿಟಿಯಲ್ಲಿ ಕನ್ನಡ ಚಿತ್ರಗಳಿಗೆ ಬೇಡಿಕೆ ಹೆಚ್ಚಾದರೆ, ನನ್ನಂಥ ಅದೃಷ್ಟಶಾಲಿ ಬೇರೆ ಇಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net