ಪತ್ರ ಕೊಡುವವನ ಪ್ರೇಮಕಥೆ, ಕಿಶೋರ್ ಈಗ ಪೋಸ್ಟ್ ಮ್ಯಾನ್ ಮನ್ಮಥ

12 pic js
Published on

ಬೆಂಗಳೂರು: ನಟ ಕಿಶೋರ್ ಚಿತ್ರದಿಂದ ಚಿತ್ರಕ್ಕೆ ವಿಭಿನ್ನವಾದ ಪಾತ್ರಗಳನ್ನು ಮಾಡುತ್ತಿರುತ್ತಾರೆ. ‘ಬೈ ಒನ್ ಗೆಟ್ ಒನ್ ಫ್ರೀ’ ಎಂಬ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಮನ್ಮಥ ಎಂಬ ಪೋಸ್ಟ್​ಮ್ಯಾನ್ ಪಾತ್ರ ಮಾಡಿದ್ದಾರೆ. ಈ ಚಿತ್ರ ಮತ್ತು ಪಾತ್ರದ ಬಗ್ಗೆ ಅವರಿಗೆ ಒಂದಿಷ್ಟು ನಿರೀಕ್ಷೆಗಳಿದ್ದು, ಜನ ಏನು ಹೇಳುತ್ತಾರೋ ಎಂದು ಕಾಯುತ್ತಿದ್ದಾರೆ. ಅಂದಹಾಗೆ, ಶುಕ್ರವಾರ ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆಯಾಗುತ್ತಿದೆ.

ಚಿತ್ರದ ಬಗ್ಗೆ ಮಾತನಾಡುವ ಅವರು, ‘ಈ ಸಿನಿಮಾ ಯಾಕೆ ಪ್ರಸ್ತುತ ಎಂದರೆ, ಸಾವು-ನೋವುಗಳ ಮಧ್ಯದಲ್ಲೂ ನಮ್ಮಲ್ಲಿ ದ್ವೇಷ ತುಂಬ ಹೆಚ್ಚುತ್ತಿದೆ. ಅಂತಹ ದ್ವೇಷದ ವಾತಾವರಣದಲ್ಲಿ ಇಲ್ಲೊಂದು ಪ್ರೀತಿಯ ಕಥೆ ಇದೆ. ಇಲ್ಲಿ ನನ್ನ ಪಾತ್ರದ ಪ್ರೇಮಕಥೆಯಲ್ಲದೆ, ಅವಳಿ ಸಹೋದರರ ಕಥೆಯೂ ಇದೆ’ ಎನ್ನುತ್ತಾರೆ.

ವಿಶೇಷವೆಂದರೆ, ನಿಜಜೀವನದ ಅವಳಿ ಸಹೋದರರೇ ಈ ಚಿತ್ರದಲ್ಲೂ ಅವಳಿ ಸಹೋದರರ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮೈಸೂರಿನ ಮಧುರಾಜ್ ಮತ್ತು ಮನುರಾಜ್ ಈ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿಟಿಯಿಂದ ಶುರುವಾಗುವ ಕಥೆಯು ಹಲವು ತಿರುವುಗಳನ್ನು ಪಡೆದು, ಕರಾವಳಿ ಪ್ರದೇಶದಲ್ಲಿ ಮುಗಿಯಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಬೆಂಗಳೂರು ಮತ್ತು ಮುರುಡೇಶ್ವರದಲ್ಲಿ ಚಿತ್ರೀಕರಣ ಮಾಡಲಾಗಿದೆ.

‘ಬೈ ಒನ್ ಗೆಟ್ ಒನ್ ಫ್ರೀ’ ಚಿತ್ರದಲ್ಲಿ ರೋಷನಿ ತೇಳ್ಕರ್ ನಾಯಕಿಯಾಗಿ ನಟಿಸಿದ್ದು, ಮಿಕ್ಕಂತೆ ಉಷಾ ಭಂಡಾರಿ, ಬಲ ರಾಜವಾಡಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹರೀಶ್ ಅನಿಲ್​ಗೋಡ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net