

ಬೆಂಗಳೂರು: ಶಂಕರ್ನಾಗ್ ಸಾವನ್ನಪ್ಪಿ ಹಲವು ದಶಕಗಳು ಕಳೆದರೂ, ಅವರನ್ನು ಕನ್ನಡಿಗರು ಒಂದಿಲ್ಲ ಒಂದು ಕಾರಣಕ್ಕೆ ಆಗಾಗ ನೆನೆಯುತ್ತಲೇ ಇರುತ್ತಾರೆ. ಅದೇ ರೀತಿ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ನವರಸನಾಯಕ ಜಗ್ಗೇಶ್ ಶಂಕ್ರಣ್ಣನನ್ನು ಮತ್ತೆ ನೆನಪು ಮಾಡಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ಅಭಿಮಾನಿಯೊಬ್ಬ ಶಂಕರ್ನಾಗ್ ಜತೆಗೆ ಜಗ್ಗೇಶ್ ಇರುವ ಸಾಂಗ್ಲಿಯಾನ ಚಿತ್ರದ ಫೋಟೋ ಶೇರ್ ಮಾಡಿಕೊಂಡು, ಈ ದೃಶ್ಯದ ಬಗ್ಗೆ ಮಾಹಿತಿ ಹಂಚಿಕೊಳ್ಳಿ ಎಂದಿದ್ದರು. ಅದಕ್ಕೆ ಉತ್ತರಿಸಿದ ಜಗ್ಗೇಶ್, ಹಲವು ದಶಕಗಳ ಕಾಲ ಹಿಂದೆ ಸರಿದರು. ಸಾಂಗ್ಲಿಯಾನ ಸಿನಿಮಾ ಬದಿಗಿಟ್ಟು, 1991ರಲ್ಲಿ ಬಿಡುಗಡೆಯಾದ ‘ಸುಂದರಕಾಂಡ’ ಚಿತ್ರವನ್ನು ನೆನಪಿಸಿಕೊಂಡರು.
‘ಆ ಚಿತ್ರದಲ್ಲಿ ನಾನು ಶಂಕರ್ನಾಗ್ ಅವರ ತಮ್ಮನ ಪಾತ್ರ ನಿಭಾಯಿಸಿದ್ದೇ. ಚಿತ್ರದ ಕೊನೇದಿನ ನನ್ನ ಭಾಗದ ಚಿತ್ರೀಕರಣ ರತನ್ ಸಿಂಗ್ ಮನೆಯಲ್ಲಿ ನಡೆದಿತ್ತು. ಸಂಜೆ 5 ಗಂಟೆಗೆ ಶೂಟಿಂಗ್ ಮುಗಿಸಿದ ಶಂಕ್ರಣ್ಣ, ಮೇಕಪ್ ತೆಗೆದು ನಾಳೆ ನನ್ನ ಹೊಸ ಚಿತ್ರದ ಮುಹೂರ್ತ ಹೋಗಬೇಕು ಎಂದು ಎಲ್ಲರಿಗೂ ಟಾಟಾ ಮಾಡಿ ಹೋದವರು ಮರಳಿ ಬರಲೇ ಇಲ್ಲ. ಹಾಗೇ ಟಾಟಾ ಮಾಡಿ ಹೋದದ್ದು, ಇನ್ನೂ ಕಣ್ಣಲ್ಲೇ ಇದೆ. ಮರು ದಿನ ಅವರು ಅಪಘಾತಕ್ಕೀಡಾದ ವಿಷಯ ಗೊತ್ತಾಯಿತು! ದೌರ್ಭಾಗ್ಯ..’ ಎಂದು ಫೋಟೋ ನೋಡಿ ಆ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.