ಮತ್ತೆ ಬಂದ ಕ್ರೇಜಿ ಕರ್ನಲ್, ಚಂದನದಲ್ಲಿ ಮರುಪ್ರಸಾರ ಪ್ರಾರಂಭ

page 10 1
Published on

ಬೆಂಗಳೂರು: ಲಾಕ್​ಡೌನ್ ಸಂದರ್ಭದಲ್ಲಿ ರಾಷ್ಟ್ರೀಯ ದೂರದರ್ಶನದಲ್ಲಿ ಹಳೆಯ ಕ್ಲಾಸಿಕ್ ಧಾರಾವಾಹಿಗಳೆಲ್ಲಾ ಮರುಪ್ರಸಾರ ಕಾಣುತ್ತಿರುವಾಗ, ಕನ್ನಡದಲ್ಲೇಕೆ ಇದು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಕನ್ನಡಿಗರಲ್ಲಿತ್ತು. ಚಂದನದಲ್ಲೂ ಈ ಹಿಂದೆ ಹಲವು ಕ್ಲಾಸಿಕ್ ಧಾರಾವಾಹಿಗಳು ಪ್ರಸಾರ ಕಂಡಿದ್ದು, ಅದನ್ನು ಮರುಪ್ರಸಾರ ಮಾಡಬಾರದೇಕೆ ಎಂಬ ಸಲಹೆ ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಚಂದನದಲ್ಲಿ ‘ಕ್ರೇಜಿ ಕರ್ನಲ್’ ಮರುಪ್ರಸಾರ ಕಾಣುತ್ತಿದೆ.

ಚಂದನದಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿಗಳ ಪೈಕಿ ‘ಕ್ರೇಜಿ ಕರ್ನಲ್’ ಸಹ ಒಂದು. ರಮೇಶ್ ಭಟ್, ಗಿರಿಜಾ ಲೋಕೇಶ್, ರಾಜಾರಾಂ ಮುಂತಾದವರು ಅಭಿನಯಿಸಿದ ಈ ಧಾರಾವಾಹಿ ಆಗ ಅತ್ಯಂತ ಜನಪ್ರಿಯವಾಗಿತ್ತು. ಅಷ್ಟೇ ಅಲ್ಲ, ಕೆಲವು ಮರುಪ್ರಸಾರಗಳನ್ನೂ ಕಂಡಿತ್ತು. ಈಗ ಸುಮಾರು 30 ವರ್ಷಗಳ ನಂತರ ಪುನಃ ಮರುಪ್ರಸಾರ ಕಾಣುತ್ತಿರುವುದು ವಿಶೇಷ.

ಈ ಬಗ್ಗೆ ಖುಷಿಯಿಂದ ಮಾತನಾಡುವ ಕರ್ನಲ್ ಪಾತ್ರ ಮಾಡಿದ್ದ ರಮೇಶ್ ಭಟ್, ‘ಆಗಿನ ಕಾಲಕ್ಕೆ ಆ ಧಾರಾವಾಹಿ ಬಹಳ ಫ್ರೆಶ್ ಆಗಿತ್ತು. ಈಗ ಸಾಕಷ್ಟು ಚಾನಲ್​ಗಳಿವೆ. ಅದರಲ್ಲಿ ಹಲವು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಮೇಲಾಗಿ ಜನರ ಅಭಿರುಚಿ ಸಹ ಬದಲಾಗಿದೆ. ಈ ಹಿನ್ನೆಲೆಯಲ್ಲಿ, ಧಾರಾವಾಹಿಗೆ ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೋ ಎಂಬ ಸಣ್ಣ ಭಯವಿತ್ತು. ಆದರೆ, ಧಾರಾವಾಹಿ ನೋಡಿದವರೆಲ್ಲಾ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ’ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ರಮೇಶ್ ಭಟ್.

ಇನ್ನು, ಇದೊಂದು ಅಶ್ಲೀಲತೆ ಇಲ್ಲದ ಶುದ್ಧ ಮನರಂಜನೆಯ ಧಾರಾವಾಹಿ ಎನ್ನುವ ರಮೇಶ್ ಭಟ್, ‘ಹಾಸ್ಯ ಎಂದರೆ ಹೀಯಾಳಿಸುವುದಾಗಿಬಿಟ್ಟಿದೆ. ಆದರೆ, ಯಾರನ್ನೂ ಹೀಯಾಳಿಸದೆ, ಸ್ವಲ್ಪವೂ ಅಶ್ಲೀಲತೆ ಇಲ್ಲದೆ ಬಹಳ ಸಹಜವಾಗಿ ಆ ಧಾರಾವಾಹಿ ಮೂಡಿಬಂದಿದೆ. ಎಲ್ಲಾ ಪಾತ್ರಧಾರಿಗಳು ಸಹ ಚೆನ್ನಾಗಿ ನಟಿಸಿದ್ದರು. ಈ ಧಾರಾವಾಹಿಯ ಇನ್ನೊಂದು ವಿಶೇಷತೆ ಎಂದರೆ, ವಿಷ್ಣುವರ್ಧನ್ ಮತ್ತು ಭಾರತೀ ವಿಷ್ಣುವರ್ಧನ್ ಅವರು ಆರಂಭದಲ್ಲಿ ಪರಿಚಯ ಮಾಡಿಕೊಟ್ಟಿದ್ದು’ ಎನ್ನುತ್ತಾರೆ ರಮೇಶ್ ಭಟ್.

‘ಕ್ರೇಜಿ ಕರ್ನಲ್’ ಧಾರಾವಾಹಿಯು ಈಗಾಗಲೇ ಚಂದನದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ಆರಕ್ಕೆ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net