ಭಾವಚಿತ್ರದಲ್ಲಿ ಗಾನವಿ; ಟೆಕ್ನೋ ಥ್ರಿಲ್ಲರ್ ಚಿತ್ರದಲ್ಲಿ ‘ಹೀರೋ’ ಬೆಡಗಿ

12 pic df
Published on

ಬೆಂಗಳೂರು:‘ಹೀರೋ’ ಮೂಲಕ ‘ಹೀರೋಯಿನ್’ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ‘ಮಗಳು ಜಾನಕಿ’ ಖ್ಯಾತಿಯ ಗಾನವಿ ಲಕ್ಷ್ಮಣ್, ಈಗ ಸದ್ದಿಲ್ಲದೆ ಇನ್ನೊಂದು ಚಿತ್ರದಲ್ಲಿ ನಟಿಸಿದ್ದಾರೆ. ಅದೇ ‘ಭಾವಚಿತ್ರ’. ಈ ಹಿಂದೆ ‘ಯಾನ’ ಚಿತ್ರದಲ್ಲಿ ನಟಿಸಿದ್ದ ಚಕ್ರವರ್ತಿ ಇಲ್ಲಿ ನಾಯಕನಾಗಿ ನಟಿಸಿದ್ದು, ನಾಯಕಿಯಾಗಿ ಗಾನವಿ ನಟಿಸಿದ್ದಾರೆ.

ಏನಿದು ‘ಭಾವಚಿತ್ರ’? ಇದೊಂದು ಟೆಕ್ನೋಥ್ರಿಲ್ಲರ್ ಎನ್ನುತ್ತಾರೆ ಗಿರೀಶ್ ಕುಮಾರ್. ಈ ಹಿಂದೆ ‘ಆವಾಹಯಾಮಿ’ ಎಂಬ ಚಿತ್ರ ನಿರ್ದೇಶಿಸಿದ್ದ ಅವರು, ಈಗ ‘ಭಾವಚಿತ್ರ’ದ ಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ಮೊಬೈಲ್ ಬಂದಾಗಿನಿಂದ ಎಲ್ಲರಿಗೂ ಭಾವಚಿತ್ರದ ಮೇಲೆ ಹೆಚ್ಚಿನ ಒಲವು. ಕ್ಯಾಮರಾ ಹಾಗೂ ಭಾವಚಿತ್ರದ ಕುರಿತು ಕಥೆ ಸಾಗುತ್ತದೆ. ಇದೊಂದು ಥ್ರಿಲ್ಲರ್ ಚಿತ್ರ. ಪ್ರೀತಿ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳು ಸಹ ಸಾಕಷ್ಟಿವೆ’ ಎನ್ನುತ್ತಾರೆ.

ಈಗಾಗಲೇ ಬೆಂಗಳೂರು, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಕಡೆ 55 ದಿನಗಳ ಕಾಲ ಚಿತ್ರೀಕರಣ ಮುಗಿಸಿದ್ದಾರೆ ಅವರು. ವುಡ್ಕ್ರೀಪರ್ಸ್ ಸಂಸ್ಥೆ ನಿರ್ವಿುಸಿರುವ ಈ ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತ ಸಂಯೋಜಿಸಿದ್ದು, ಅಜಯ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಚಕ್ರವರ್ತಿ ಮತ್ತು ಗಾನವಿ ಜತೆಗೆ ಅವಿನಾಶ್, ಕಾರ್ತಿಕ್ ಸುಂದರಂ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net