

ಬೆಂಗಳೂರು: ನಟ ಭುವನ್ ಪೊನ್ನಣ್ಣ ರಾಂಧವ ಬಳಿಕ ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಸಿನಿಮಾದ ಜತೆಗೆ ಆಗಮಿಸುತ್ತಿದ್ದಾರೆ. ಆ ಚಿತ್ರಕ್ಕೆ ಪ್ರಣಯರಾಜ ಎಂದು ಹೆಸರನ್ನೂ ಇಡಲಾಗಿದೆ. ಅಂದಹಾಗೆ ಶೀರ್ಷಿಕೆಗೆ ತಕ್ಕಂತೆ ಈ ಸಿನಿಮಾದಲ್ಲಿ ಭುವನ್ಗೆ ಬರೋಬ್ಬರಿ 21 ಮಂದಿ ನಾಯಕಿಯರು!
ಹೌದು, ಇತ್ತೀಚೆಗಷ್ಟೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿಕೊಂಡಿರುವ ಭುವನ್, ಸ್ಯಾಂಡಲ್ವುಡ್ನ ಪ್ರಣಯರಾಜ ಎಂದೇ ಖ್ಯಾತಿ ಪಡೆದಿರುವ ಶ್ರೀನಾಥ್ ಅವರಿಂದ ಚಿತ್ರದ ಶೀರ್ಷಿಕೆ ಫಸ್ಟ್ ಲುಕ್ ಬಿಡುಗಡೆ ಮಾಡಿಸಿದ್ದಾರೆ. ಇತ್ತ ಡಿ. 30ರಂದು ಭುವನ್ ಜನ್ಮದಿನದ ಆಚರಿಸಿಕೊಳ್ಳಲಿದ್ದು, ಚಿತ್ರದ ಟೀಸರ್ ಸಹ ಬಿಡುಗಡೆ ಆಗಲಿದೆ. ಅಂದಹಾಗೆ ಈ ಚಿತ್ರವನ್ನು ಟಿ. ಸುದರ್ಶನ್ ಚಕ್ರ ನಿರ್ದೇಶಿಸಲಿದ್ದಾರೆ.
ಅಂದಹಾಗೆ, 21 ಮಂದಿ ನಾಯಕಿಯರ ಪೈಕಿ ಕರ್ನಾಟಕದವರು ಸೇರಿ ಪಶ್ಚಿಮ ಬಂಗಾಳ, ಮುಂಬೈಯಿಂದಲೂ ಹಲವು ನಟಿಯರು ಕನ್ನಡಕ್ಕೆ ಎಂಟ್ರಿಕೊಡುತ್ತಿದ್ದಾರೆ. ಲಿಕ್ರಾ ಪ್ರೊಡಕ್ಷನ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ವಿಕಾಸ್ ರಾಜ್ ವಸಿಷ್ಟ ಸಂಗೀತ ನೀಡಿಲಿದ್ದಾರೆ. ರಾಜ ಶಿವಶಂಕರ್ ಛಾಯಾಗ್ರಹಣ ನಿಭಾಯಿಸಲಿದ್ದಾರೆ. ಜನವರಿಯಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ.