

ಬೆಂಗಳೂರು: ಹೆಡ್ ಬುಷ್ ಸಿನಿಮಾ ವಿವಾದಕ್ಕೆ ಸಂಬಂಧಪಟ್ಟಂತೆ ನಟ ಅಹಿಂಸಾ ಚೇತನ್ ಪ್ರತಿಕ್ರಿಯಿಸಿದ್ದಾರೆ. 'ನಾನು ಸಿನಿಮಾವನ್ನು ಸಂಪೂರ್ಣವಾಗಿ ವೀಕ್ಷಿಸಿದ್ದೇನೆ. ಆಕ್ಷೇಪಾರ್ಹ ಎನಿಸುವಂತಹ ದೃಶ್ಯಗಳನ್ನು ತೆಗೆದು ಹಾಕುವಂತೆ ಒತ್ತಾಯಿಸಲಾಗಿದೆ' ಎಂದು ಹೇಳಿದ್ದಾರೆ.
ಚಿತ್ರವೊಂದು ಸೆನ್ಸಾರ್ ಮಂಡಳಿಯ ಅನುಮತಿ ಪಡೆದ ನಂತರ, ಆ ಚಿತ್ರಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ನಟ ಚೇತನ್ ಟ್ವೀಟ್ ಮಾಡುವ ಮೂಲಕ ಹೇಳಿದ್ದಾರೆ.
ಏನಿದು ವಿವಾದ?
‘ಹೆಡ್ ಬುಷ್’ ಚಿತ್ರದಲ್ಲಿ ಬಳಸಿರುವ ಕೆಲವು ಪದಗಳು ಹಾಗೂ ಸನ್ನಿವೇಶಗಳನ್ನು ತೆಗೆಯಬೇಕು ಎಂದು ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯದ ಮುಖಂಡರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದರು.
ಚಿತ್ರದಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನ ಹಾಗೂ ತಿಗಳರ ಪೇಟೆ ಕರಗ ಅಂತ ತೋರಿಸಲಾಗುತ್ತದೆ. ಆದರೆ, ಅಲ್ಲಿ ತೋರಿಸಿರುವ ಕರಗ ಚುಂಚನಕಟ್ಟೆ ಕರಗದ್ದು. ಅಷ್ಟೇ ಅಲ್ಲ, ನಮ್ಮ ಸಮುದಾಯದ ಆಚಾರ ವಿಚಾರಗಳನ್ನ ಚಿತ್ರದಲ್ಲಿ ಗಾಳಿಗೆ ತುರಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ಚಿತ್ರದ ನಟ ಧನಂಜಯ್ ಮಾತನಾಡಿ, ತಿಗಳರ ಸಮುದಾಯಕ್ಕೆ ನಮ್ಮಿಂದ ಹರ್ಟ್ ಆಗಿದೆ ಅನ್ನೋದು ಗೊತ್ತಾಗಿದೆ. ಯಾರ ಭಾವನೆಗಳನ್ನೂ ನೋಯಿಸುವುದಕ್ಕೆ ನನಗೆ ಇಷ್ಟ ಇಲ್ಲ. ಹೀಗಾಗಿ, ಜುಜಿಬಿ ಕರಗ ಪದ ಮ್ಯೂಟ್ ಮಾಡೋಕೆ ನಿರ್ಧಾರ ಮಾಡಿದ್ದೇವೆ. ಇದನ್ನು ಇಲ್ಲಿಗೆ ಬಿಟ್ಟು ಕೆಲಸದ ಕಡೆ ಗಮನ ಕೊಡಬೇಕು, ಒಳ್ಳೆಯ ಸಿನಿಮಾಗಳನ್ನು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು' ಎಂದು ಹೇಳಿ ಕ್ಷಮೆ ಕೇಳಿದ್ದಾರೆ.