

ಬೆಂಗಳೂರು: ಶಾನ್ವಿ ಶ್ರೀವಾಸ್ತವ್ ಗ್ಲಾಮರ್ ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು. ಅವರ ಸಿನಿಮಾ ಬತ್ತಳಿಕೆಯಲ್ಲಿ ಅಂಥ ಪಾತ್ರಗಳೇ ಹೆಚ್ಚು ಕಾಣಿಸುತ್ತವೆ. ಇದೀಗ ಅದರಾಚೆಗಿನ ಪಾತ್ರಗಳತ್ತ ಶಾನ್ವಿ ಮುಖ ಮಾಡಿದ್ದಾರೆ. ಸದ್ಯ ಅವರ ಕೈಯಲ್ಲಿರುವ ಚಿತ್ರಗಳೇ ಅದಕ್ಕೆ ಸಾಕ್ಷಿ. ‘ತ್ರಿಶೂಲಂ’, ‘ಕಸ್ತೂರಿ ಮಹಲ್’ ಚಿತ್ರಗಳ ನಂತರ ಶಾನ್ವಿ ಸೆದ್ದಿಲ್ಲದೆ ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅದೇ ‘ಬ್ಯಾಂಗ್’. ಕಳೆದ ಮೂರು ದಿನಗಳಿಂದ ಶ್ರೀ ಗಣೇಶ್ ಪರಶುರಾಮ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಕಥೆ ಮತ್ತು ಪಾತ್ರದ ಗಟ್ಟಿತನ ಇಷ್ಟವಾಗಿದ್ದರಿಂದ ಈ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಹೇಳುವ ಶಾನ್ವಿ, ‘ಇದೊಂದು ಡಾರ್ಕ್ ಕಾಮಿಡಿ ಶೈಲಿಯ ಸಿನಿಮಾ. ಈ ಹಿಂದೆ ಇಂಥ ಸಿನಿಮಾದಲ್ಲಿ ನಾನು ನಟಿಸಿಲ್ಲ. ತುಂಬ ಸವಾಲೆನಿಸುವ ಪಾತ್ರ ‘ಬ್ಯಾಂಗ್’ನಲ್ಲಿ ಸಿಕ್ಕಿದೆ. ವಿಶೇಷವಾಗಿ, ನೆಗೆಟಿವ್ ಶೇಡ್ನಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ. ಆಕ್ಷನ್ ಅಂಶಗಳು ತುಂಬ ಇವೆ’ ಎನ್ನುತ್ತಾರೆ.
ಇತ್ತ ದಿನೇಶ್ ಬಾಬು ನಿರ್ದೇಶನದ ‘ಕಸ್ತೂರಿ ಮಹಲ್’ ಸಿನಿಮಾದಲ್ಲಿ ರಾಣಿಯ ಅವತಾರ ಎತ್ತಿರುವ ಶಾನ್ವಿ, ಮಲಯಾಳಂನ ‘ಮಹಾವೀರಯಾರ್’ ಚಿತ್ರದಲ್ಲಿ 18 ವರ್ಷದ ಹುಡುಗಿ ಯಾಗಿದ್ದಾರೆ. ಇದೀಗ ‘ಬ್ಯಾಂಗ್’ನಲ್ಲಿ ನೆಗೆಟಿವ್ ಶೇಡ್. ಹೀಗೆ ಪಾತ್ರದಿಂದ ಪಾತ್ರಕ್ಕೆ ಹೊಸತನ್ನು ಬಯಸುತ್ತಿದ್ದಾರೆ. ‘ಪ್ರತಿಯೊಬ್ಬ ಕಲಾವಿದರೂ ಬಗೆಬಗೆಯ ಪಾತ್ರ ಮಾಡಲು ಸಿದ್ಧರಿರುತ್ತಾರೆ. ಆದರೆ, ಅವರನ್ನು ಒಂದೇ ತರಹದ ಪಾತ್ರಗಳಿಗೆ ಬ್ರಾಂಡ್ ಮಾಡಿರುತ್ತಾರೆ. ಹೀಗಿರುವಾಗ ಅದನ್ನು ದಾಟಿ ನಾವು ಹೊಸ ಪ್ರಯತ್ನಗಳಿಗೆ ಕೈಹಾಕಬೇಕು. ಇದೀಗ ನನ್ನ ವಿಚಾರದಲ್ಲಿಯೂ ಅದನ್ನೇ ಮುಂದುವರಿಸಿದ್ದೇನೆ’ ಎನ್ನುತ್ತಾರವರು.