

ಈ ಮಧ್ಯೆ, ಚಿತ್ರತಂಡವು ಸೋಷಿಯಲ್ ಮೀಡಿಯಾ ಮೂಲಕ ಭರ್ಜರಿ ಚಿತ್ರದ ಕುರಿತಾಗಿ ಭರ್ಜರಿ ಪ್ರಚಾರ ಮಾಡುತ್ತಿದೆ. ಪ್ರಚಾರ ಮಾಡುತ್ತಿರುವುದಷ್ಟೇ ಅಲ್ಲ, ವಿನೂತನ ಪೋಸ್ಟರ್ಗಳ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಎತ್ತಿಹಿಡಿಯುವ ಕೆಲಸಗಳನ್ನು ಮಾಡುತ್ತಿದೆ.
ಇದನ್ನೂ ಓದಿ: ಶಿವರಾಜಕುಮಾರ್-ಧನಂಜಯ್ ಜತೆಯಾದ ಫೃಥ್ವಿ ಅಂಬರ್
ವಿಶೇಷವೆಂದರೆ, ಜನರಿಗೆ ಗೊತ್ತಿರದ ಎಷ್ಟೋ ವಿಷಯ ಮತ್ತು ಕಾನೂನುಗಳನ್ನು ಈ ಪೋಸ್ಟರ್ಗಳ ಮೂಲಕ ಪ್ರಚಾರ ಮಾಡುವುದರ ಜತೆಗೆ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು 'ಆಕ್ಟ್ 1978' ಚಿತ್ರತಂಡವು ಮಾಡುತ್ತಿದೆ ಎನ್ನುವುದು ವಿಶೇಷ. ಉದಾಹರಣೆಗೆ ಹೇಳಬೇಕೆಂದರೆ, 2011ರಲ್ಲಿ ದೆಹಲಿ ನ್ಯಾಯಾಲಯ ಮತ್ತು ಸುಪ್ರೀಂಕೋರ್ಟ್ ಒಂದು ಮಹತ್ವದ ತೀರ್ಪನ್ನು ಕೊಟ್ಟಿದೆ. ಇದು ಇಡೀ ದೇಶಕ್ಕೇ ಅನ್ವಯವಾಗುತ್ತದೆ. ಈ ತೀಪಿರ್ನ ಪ್ರಕಾರ ಪ್ರೈವೇಟ್ ಆಸ್ಪತ್ರೆಗಳು ಬಡವರಿಗೆ ತಮ್ಮ ಆಸ್ಪತ್ರೆಯಲ್ಲಿ 25 ಪರ್ಸೆಂಟ್ ಬೆಡ್ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ಕೊಡಬೇಕು. ಅದೇ ತರಹ, ಪೊಲೀಸರಿಗೆ ಜನರನ್ನು ಹೊಡೆಯುವ ಅಧಿಕಾರವೇ ಇಲ್ಲ, ಎಂ.ಆರ್.ಪಿ ಎಂದರೆ ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರುವಂತಿಲ್ಲ ಎಂಬ ಹಲವು ವಿಷಯಗಳನ್ನು ಚಿತ್ರತಂಡ ಪೋಸ್ಟರ್ಗಳ ಮೂಲಕ ಜಾಗೃತಿ ಮೂಡಿಸುತ್ತಿದೆ.
ಈ ಕುರಿತು 'ವಿಜಯವಾಣಿ' ಜತೆಗೆ ಮಾತನಾಡಿದ ನಿರ್ದೇಶಕ ಮಂಸೋರೆ, 'ನಾವು ಚಿತ್ರಕಥೆ ಮಾಡುವ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದೆವು. ಅದರಲ್ಲೂ ಕಥೆಗಾರ ದಯಾನಂದ್ ಇಂಥಾ ವಿಷಯಗಳ ಬಗ್ಗೆ ಬಹಳ ತಿಳಿದುಕೊಂಡಿದ್ದಾರೆ. ಇದನ್ನೆಲ್ಲಾ ಕಾರಣಾಂತರಗಳಿಂದ ಚಿತ್ರದಲ್ಲಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಆಗಲೇ ಇದನ್ನೆಲ್ಲಾ ಚಿತ್ರದ ಪ್ರಚಾರ ಮಾಡುವ ಸಂದರ್ಭದಲ್ಲಿ ಪೋಸ್ಟರ್ಗಳಲ್ಲಿ ಬಳಸಿಕೊಳ್ಳಬೇಕು, ಈ ಮೂಲಕ ಜರಿಗೆ ಜಾಗೃತಿ ಮೂಡಿಸಬೇಕು ಎಂಬುದನ್ನು ತೀರ್ಮಾನಿಸಿದ್ದೆವು. ಅದರಂತೆ ಇದೀಗ ಬಿಡುಗಡೆಯ ಸಂದರ್ಭದಲ್ಲಿ ಹೀಗೆ ಜನ ಜಾಗೃತಿ ಮೂಡಿಸುವ ಪೋಸ್ಟರ್ಗಳನ್ನು ಬಿಡುಗಡೆ ಮಾಡುತ್ತಿದ್ದೇವೆ' ಎನ್ನುತ್ತಾರೆ ಮಂಸೋರೆ.
ಚಿತ್ರ ಬಿಡುಗಡೆಯಾಗುವವರೆಗೂ ಒಟ್ಟು 25 ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಗುತ್ತದಂತೆ. ಈ ಪೈಕಿ ಸದ್ಯಕ್ಕೆ ಕೆಲವು ಮಾತ್ರ ಬಿಡುಗಡೆ ಮಾಡಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.