ಶಿವರಾಜಕುಮಾರ್​-ಧನಂಜಯ್​ ಜತೆಯಾದ ಫೃಥ್ವಿ ಅಂಬರ್​

Prithvi Amber - Final
Published on

ಬೆಂಗಳೂರು: ಶಿವರಾಜಕುಮಾರ್​ ಮತ್ತು 'ಡಾಲಿ' ಧನಂಜಯ್​ ಅಭಿನಯದಲ್ಲಿ ತಮಿಳಿನ ಖ್ಯಾತ ಛಾಯಾಗ್ರಾಹಕ ವಿಜಯ್​ ಮಿಲ್ಟನ್​ ಒಂದು ಹೊಸ ಚಿತ್ರವನ್ನು ನಿರ್ದೇಶಿಸುತ್ತಿರುವ ಸುದ್ದಿ ಗೊತ್ತೇ ಇದೆ. ಲಾಕ್​ಡೌನ್​ ಮುಗಿದ ತಕ್ಷಣವೇ ಈ ಚಿತ್ರದ ಘೋಷಣೆಯಾಗಿತ್ತು.

ಇದೀಗ ಈ ಚಿತ್ರಕ್ಕೆ ಪೃಥ್ವಿ ಅಂಬರ್​ ಸೇರ್ಪಡೆಯಾಗಿದೆ. 'ದಿಯಾ' ನಂತರ ಸಖತ್​ ಬ್ಯುಸಿಯಾಗಿರುವ ಪೃಥ್ವಿ, ಈ ಹೆಸರಿಡ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಪೃಥ್ವಿ ಅವರ ಪಾತ್ರವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಚಿತ್ರದಲ್ಲಿ ಅವರಿಗೊಂದು ಒಳ್ಳೆಯ ಪಾತ್ರ ಸಿಕ್ಕಿದೆಯಂತೆ.

ಅಂದಹಾಗೆ, ಈ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳು ಇದೀಗ ಭರದಿಂದ ಸಾಗಿದ್ದು, ಸದ್ಯದಲ್ಲೇ ನವೆಂಬರ್​ 19ರಂದು ಚಿತ್ರದ ಮುಹೂರ್ತವಾಗಲಿದೆ ಎಂದು ಹೇಳಲಾಗಿದೆ. ಈಗಾಗಲೇ 'ಭಜರಂಗಿ 2' ಚಿತ್ರೀಕರಣ ಮುಗಿಸಿರುವ ಶಿವರಾಜಕುಮಾರ್​, ಮೊದಲಿಗೆ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರಂತೆ. ನಂತರದ ದಿನಗಳಲ್ಲಿ ಧನಂಜಯ್​ ಮತ್ತು ಪೃಥ್ವಿ ಅಂಬರ್​ ಚಿತ್ರೀಕರಣಕ್ಕೆ ಸೇರ್ಪಡೆಯಾಗಲಿದ್ದಾರೆ.

ಈ ಹೆಸರಿಡದ ಚಿತ್ರವನ್ನು ಕೃಷ್ಣಸಾರ್ಥಕ್​ ನಿರ್ಮಿಸುತ್ತಿದ್ದು, ಅನೂಪ್​ ಸೀಳಿನ್​ ಸಂಗೀತ ಸಂಯೋಜಿಸುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ 'ಅಟ್ಟಹಾಸ', 'ಪೊಗರು' ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ವಿಲಯ್​ ಮಿಲ್ಟನ್​, ಈ ಚಿತ್ರಕ್ಕೂ ಛಾಯಾಗ್ರಹಣ ಮಾಡುತ್ತಿದ್ದಾರಂತೆ. ಈ ಚಿತ್ರದ ಉಳಿದ ಪಾತ್ರವರ್ಗ ಹಾಗೂ ತಂತ್ರಜ್ಱರ ಪಟ್ಟಿ ಸದ್ಯದಲ್ಲೇ ಫೈನಲ್​ ಆಗಲಿದೆ.

ಪೃಥ್ವಿ ಅಂಬರ್​ ಈಗಾಗಲೇ 'ಲೈಫ್​ ಈಸ್​ ಬ್ಯೂಟಿಫುಲ್​' ಮತ್ತು 'ಶುಗರ್​ಲೆಸ್​' ಚಿತ್ರಗಳಲ್ಲಿ ನಟಿಸುತ್ತಿದ್ದು, ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಇನ್ನು 'ಫಾರ್​ ರಿಜಿಸ್ಟ್ರೇಶನ್​' ಎಂಬ ಚಿತ್ರದಲ್ಲೂ ಅವರು ನಟಿಸುತ್ತಿದ್ದು, ಜತೆಗೆ ಶಿವರಾಜಕುಮಾರ್​ ಅಭಿನಯದ ಈ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಇದಲ್ಲದೆ, ಇನ್ನೂ ಎರಡು ಹೊಸ ಚಿತ್ರಗಳನ್ನು ಪೃಥ್ವಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net