ಮಹೇಶ್ ಬಾಬು ಆಯ್ತು; ಈಗ ಸಲ್ಮಾನ್ ಸರದಿ

Salman Khan Final
Published on

ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರದ ಚಿತ್ರೀಕರಣ ಇನ್ನೂ ಪ್ರಾರಂಭವೇ ಆಗಿಲ್ಲ, ಆಗಲೇ ಆ ಚಿತ್ರದ ಬಗ್ಗೆ ಎಷ್ಟೆಲ್ಲಾ ಸುದ್ದಿಗಳು ಹರಡಿವೆಯೆಂದರೆ, ಒಂದು ಪುಸ್ತಕವನ್ನೇ ಮಾಡಿಬಿಡಬಹುದೇನೋ? ಮೊದಲಿಗೆ ಈ ಚಿತ್ರದಲ್ಲಿ ‘ಮೆಗಾ ಸ್ಟಾರ್’ ಜತೆಗೆ ಮಹೇಶ್ ಬಾಬು ನಟಿಸುತ್ತಾರೆ ಎಂದು ಹೇಳಲಾಯ್ತು. ಈಗ ಆ ಜಾಗಕ್ಕೆ ಸಲ್ಮಾನ್ ಖಾನ್ ಬಂದಿದ್ದಾರಂತೆ.

ಹೌದು, ‘ಆಚಾರ್ಯ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಲ್ಮಾನ್ ಖಾನ್ ಅವರನ್ನು ಕೇಳಿಕೊಂಡಿದ್ದು, ಅದಕ್ಕೆ ಅವರು ಒಪ್ಪಿದ್ದಾರೆ ಎಂಬಂತಹ ಸುದ್ದಿಗಳು ಟಾಲಿವುಡ್‌ನಲ್ಲಿ ಎರಡ್ಮೂರು ದಿನಗಳಿಂದ ವಿಪರೀತ ಕೇಳಿ ಬರುತ್ತಿದೆ. ಈ ಕುರಿತು ‘ಆಚಾರ್ಯ’ ನಿರ್ದೇಶಕ ಕೊರಟಾಲ ಶಿವ ಅವರನ್ನು ಮಾಧ್ಯಮದವರು ಕೇಳಿದರೆ, ಇದೊಂದು ಶುದ್ಧ ಸುಳ್ಳು ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಇಂತಹ ಸುದ್ದಿಗಳನ್ನು ಅದ್ಯಾರು ಹಬ್ಬಿಸುತ್ತಾರೋ ಗೊತ್ತಿಲ್ಲ. ಇದರಲ್ಲಿ ಯಾವುದೇ ಹುರುಳಿಲ್ಲ. ಅವರು ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿರುವುದಿರಲಿ, ನಾವು ಅವರನ್ನು ಸಂಪರ್ಕಿಸಲೇ ಇಲ್ಲ. ಹಾಗಿದ್ದೂ, ಅದು ಹೇಗೆ ಈ ತರಹ ಸುದ್ದಿಗಳು ಹುಟ್ಟಿಕೊಳ್ಳುತ್ತವೋ ಗೊತ್ತಿಲ್ಲ. ಸದ್ಯದಲ್ಲೇ ಚಿತ್ರದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದನ್ನು ನಾವೇ ತಿಳಿಸುತ್ತೇವೆ’ ಎಂದು ಕೊರಟಾಲ ಶಿವ ಹೇಳಿಕೊಂಡಿದ್ದಾರೆ.

‘ಆಚಾರ್ಯ’ ಚಿತ್ರದಲ್ಲಿ ಇದಕ್ಕೂ ಮುನ್ನ ಚಿರಂಜೀವಿ ಅವರಿಗೆ ನಾಯಕಿಯಾಗಿ ತ್ರಿಷಾ ನಟಿಸಬೇಕಿತ್ತು. ಆದರೆ, ತ್ರಿಷಾ ಚಿತ್ರದಿಂದ ಹೊರನಡೆದಿದ್ದರಿಂದ, ಕಾಜಲ್ ಅಗರವಾಲ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಈಗ ಕಾಜಲ್ ಸಹ ಚಿತ್ರದಲ್ಲಿ ನಟಿಸುವುದು ಕಷ್ಟ ಎಂದು ಹೇಳಿದ್ದಾರಂತೆ. ಅವರ ಬದಲು ಯಾರನ್ನು ನಾಯಕಿಯಾಗಿ ಆಯ್ಕೆ ಮಾಡಬೇಕೆಂದು ಚಿತ್ರತಂಡದವರೆಲ್ಲಾ ತಲೆ ಕೆಡಿಸಿಕೊಂಡು ಕುಳಿತಿರುವಾಗಲೇ, ಅದ್ಯಾರೋ ಸಲ್ಮಾನ್ ನಟಿಸುತ್ತಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ತೇಲಿ ಬಿಟ್ಟಿದ್ದಾರೆ.

ಇನ್ನಾದರೂ ಚಿತ್ರತಂಡದವರು ಚಿತ್ರದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂದು ಅಧಿಕೃತ ಘೋಷಣೆ ಹೊರಡಿಸಿದರೆ ಒಳ್ಳೆಯದು. ಇಲ್ಲವಾದರೆ ಈ ತರಹ ಸುದ್ದಿಗಳನ್ನು ಕೇಳುತ್ತಿರಬೇಕು ಮತ್ತು ಅವೆಲ್ಲಾ ಸುಳ್ಳು ಎಂದು ಹೇಳುತ್ತಲೇ ಇರಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net