ಮತ್ತೆ ಬಂದ ಅಭಿಜಿತ್​; 'ಅಟ್ಲಿ' ಚಿತ್ರದಲ್ಲೊಂದು ವಿಶೇಷ ಪಾತ್ರ

Abhijith
Published on

ಬೆಂಗಳೂರು: ಕೆಲವು ವರ್ಷಗಳೇ ಆಗಿತ್ತು ಅಭಿಜಿತ್​ ಚಿತ್ರವೊಂದರಲ್ಲಿ ನಟಿಸಿ, ವಿಜಯ್​ ರಾಘವೇಂದ್ರ ಅಭಿನಯದ 'ಶಿವಯೋಗಿ ಶ್ರೀ ಪುಟ್ಟಯ್ಯಜ್ಜ' ಎಂಬ ಚಿತ್ರದಲ್ಲಿ ನಟಿಸಿದ ನಂತರ ಅವರು ಕೆಲವು ವರ್ಷಗಳ ಕಾಲ ಕಾರಣಾಂತರಗಳಿಂದ ಚಿತ್ರರಂಗದಿಂದ ದೂರವೇ ಇದ್ದರು. ಕಿರುತೆರೆಯಲ್ಲಿ 'ಸತ್ಯ' ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು.

ಈಗ ಅವರು 'ಅಟ್ಲಿ' ಎಂಬ ಹೊಸ ಚಿತ್ರದಲ್ಲಿ ನಟಿಸುವ ಮೂಲಕ ವಾಪಸ್ಸಾಗಿದ್ದಾರೆ. ಚಿತ್ರದ ತಮ್ಮ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಆರ್​.ಜಿ.ವಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ರಂಗನಾಥ್ ಆರ್ ನಿರ್ದೇಶನದ 'ಅಟ್ಲಿ' ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ದ್ವಿತೀಯ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಇತ್ತೀಚಿಗೆ ನಟ-ನಿರ್ದೇಸಕ ರಿಷಭ್​ ಶೆಟ್ಟಿ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದರು.

ಈ ಚಿತ್ರದಲ್ಲಿ ತಮ್ಮ ಪಾತ್ರದ ಕುರಿತು ಮಾತನಾಡಿರುವ ಅಭಿಜಿತ್​, 'ಈ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. 90ರ ದಶಕದಲ್ಲಿ ನನ್ನ ಹಾಗೂ ಶೃತಿ ಅವರ ಜೋಡಿಯಲ್ಲಿ ಬಿಡುಗಡೆಯಾಗಿದ್ದ ಕೆಲವು ಚಿತ್ರಗಳು ಪ್ರೇಕ್ಷಕರ ಮನ ಗೆದ್ದಿದೆ. ಈಗ ಹಲವು ವರ್ಷಗಳ ನಂತರ ನಾನು ಶೃತಿ ಅವರ ಜತೆ ಈ ಚಿತ್ರದಲ್ಲಿ ನಟಿಸಿರುವುದು ಸಂತೋಷ ತಂದಿದೆ' ಎಂದು ಅವರು ಹೇಳಿದ್ದಾರೆ.

ಕಾಸರಗೋಡಿನ ಸುತ್ತಮುತ್ತ ಸಾಗುವ ಈ ಚಿತ್ರದ ಕಥೆಯನ್ನು ನಿರ್ದೇಶಕ ರಂಗನಾಥ್​ ಅವರೇ ಬರೆದಿದ್ದಾರೆ. ಈ ಹಿಂದೆ 'ಅರಿವು' ಮತ್ತು 'ಪ್ರಭುತ್ವ' ಚಿತ್ರಗಳನ್ನು ನಿರ್ದೇಶಿಸದ್ದ ಅವರಿಗೆ ಇದು ಮೂರನೆಯ ಚಿತ್ರ. ಈ ಚಿತ್ರದ ನಾಯಕಿಯಾಗಿ ಪೂಜಾ ಜನಾರ್ದನ್ ನಟಿಸುತ್ತಿದ್ದಾರೆ. ಜತೆಗೆ ಶೃತಿ, ಅಭಿಜಿತ್, ಅತುಲ್ ಕುಲಕರ್ಣಿ, ರವಿ ಕಾಳೆ, ನಾಜರ್, ಸುಪ್ರೀತ್, ಮನು ಮಯೂರ, ಲಲಿತಾ ಮುಂತಾದವರು ನಟಿಸುತ್ತಿದ್ದಾರೆ.

'ಅಟ್ಲಿ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸುತ್ತಿದ್ದು, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net