'ಮಂಡ್ಯ ಹೈದ'ನಾದ ಅಭಯ್; ಇನ್ನೊಂದು ಚಿತ್ರದಲ್ಲಿ 'ಮನಸಾಗಿದೆ' ಹುಡುಗ

Mandya Haida
Published on

ಬೆಂಗಳೂರು: ಕೆಲವರು ಪ್ರೀತಿಗೋಸ್ಕರ ಪ್ರಾಣವನ್ನು ಕೊಡುತ್ತಾರೆ. ಇನ್ನೂ ಕೆಲವರು ಪ್ರಾಣವನ್ನೇ ತೆಗೆಯುತ್ತಾರೆ. ಇಲ್ಲಿ ನಾಯಕನ ಎದುರು ಎರಡು ಆಪ್ಶನ್​ಗಳಿರುತ್ತವೆ. ಇವೆರಡರಲ್ಲಿ ಅವನು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ? ಪ್ರಾಣ ಕೊಡುತ್ತಾನಾ? ಅಥವಾ ಪ್ರಾಣ ತೆಗೆಯುತ್ತಾನಾ?

ಇದು 'ಮಂಡ್ಯ ಹೈದ' ಎಂಬ ಚಿತ್ರದ ಒನ್​ಲೈನ್​ ಸ್ಟೋರಿ. ಕಳೆದ ವರ್ಷ 'ಮನಸಾಗಿದೆ' ಎಂಬ ಚಿತ್ರ ಬಂದಿದ್ದು ನೆನಪಿರಬಹುದು. ಅಭಯ್​ ಎಂಬ ಹೊಸ ಹುಡುಗ ನಾಯಕನಾಗಿ ಎಂಟ್ರಿ ಕೊಟ್ಟ ಚಿತ್ರ ಇದು. ಈ ಚಿತ್ರವನ್ನು ನಾಯಕನ ತಂದೆ ಚಂದ್ರಶೇಖರ್​ ನಿರ್ಮಿಸಿದ್ದರು. ಚಿತ್ರ ಅಷ್ಟೇನೂ ಸುದ್ದಿಯಾಗಲಿಲ್ಲ. ಈಗ ಚಂದ್ರಶೇಖರ್​ ತಮ್ಮ ಮಗನಿಗಾಗಿ ಇನ್ನೊಂದು ಚಿತ್ರ ನಿರ್ಮಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಅದೇ 'ಮಂಡ್ಯ ಹೈದ'. ಇತ್ತೀಚೆಗೆ ಈ ಚಿತ್ರದ ಫಸ್ಟ್​ಲುಕ್ ಬಿಡುಗಡೆಯಾಗಿದೆ.

'ಮಂಡ್ಯ ಹೈದ' ಚಿತ್ರವನ್ನು ವಿ. ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೇ ತಿಂಗಳ ೧೮ರಂದು ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಬಂಡೆ ಮಾಂಕಾಳಮ್ಮ ದೇವಸ್ಥಾನದಲ್ಲಿ ನಡೆಯಲಿದೆ. ಈ ಚಿತ್ರದ ಕುರಿತು ಮಾತನಾಡುವ ಅವರು, 'ಈ ಚಿತ್ರದ ಮೂಲಕ ಮಂಡ್ಯದ ಹೈದನೊಬ್ಬನ ಲವ್​ ಯಾವ ತರಹ ಇರುತ್ತದೆ ಎಂದು ಹೇಳುವುದಕ್ಕೆ ಹೊರಟಿದ್ದೇವೆ. ಈ ಚಿತ್ರದ ಶೇ.೮೦ ರಷ್ಟು ಚಿತ್ರೀಕರಣವನ್ನು ಮಂಡ್ಯ ಹಾಗೂ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಉಳಿದ ೨೦ ಭಾಗವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸುತ್ತಿದ್ದೇವೆ' ಎಂದು ಚಿತ್ರದ ಬಗ್ಗೆ ಮಾಹಿತಿ ಕೊಡುತ್ತಾರೆ ಶ್ರೀಕಾಂತ್​.

'ಮಂಡ್ಯ ಹೈದ' ಚಿತ್ರದಲ್ಲಿ ಅಭಯ್​ಗೆ ನಾಯಕಿಯಾಗಿ ಭೂಮಿಕಾ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ೫ ಹಾಡುಗಳಿದ್ದು, ಸುರೇಂದ್ರನಾಥ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮನುಗೌಡ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net