

ಮುಂಬೈ: ಆಮೀರ್ ಖಾನ್ ಮತ್ತು ಗ್ರಾಂಡ್ಮಾಸ್ಟರ್ ವಿಶ್ವನಾಥನ್ ಆನಂದ್ ಇಬ್ಬರೂ ಹಲವು ವರ್ಷಗಳ ಸ್ನೇಹಿತರು. ಕೆಲವು ಚೆಸ್ ಟೂರ್ನಿಗಳನ್ನು ಜತೆಯಾಗಿ ಉದ್ಘಾಟಿಸಿದವರು. ತಮ್ಮ ಆಟದ ಮೂಲಕ ಕೆಲವು ಟೂರ್ನಿಗಳಿಗೆ ಚಾಲನೆ ನೀಡಿದವರು. ಇದೀಗ ವಿಶ್ವನಾಥನ್ ಆನಂದ್ ಮತ್ತು ಆಮೀರ್ ಮತ್ತೆ ಜತೆಯಾಗಿ ಆಟ ಆಡಲು ಸಜ್ಜಾಗಿದ್ದಾರೆ.
ಕರೊನಾ ವಿರುದ್ಧ ಹೋರಾಟಕ್ಕೆ ಧನಸಂಗ್ರಹಿಸಲು 'ಚೆಕ್ಮೇಟ್ ಕೋವಿಡ್' ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮ ಜೂನ್ 13ರಂದು ಮುಂಬೈನಲ್ಲಿ ನಡೆಯಲಿದೆ. ಆಮೀರ್ ಖಾನ್, ಸಾಜಿದ್ ನಾಡಿಯಾಡ್ವಾಲ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆರಂಭಿಕ ಮ್ಯಾಚ್ನಲ್ಲಿ ವಿಶ್ವನಾಥನ್ ಆನಂದ್ ಮತ್ತು ಆಮೀರ್ ಖಾನ್ ಆಡಲಿದ್ದಾರೆ.
ಇನ್ನು, ಆಮೀರ್ ಖಾನ್ ಸದ್ಯ 'ಲಾಲ್ ಸಿಂಗ್ ಚಡ್ಢಾ' ಚಿತ್ರದಲ್ಲಿ ನಟಿಸುತ್ತಿದ್ದು, ಸದ್ಯದಲ್ಲೇ ಕಾರ್ಗಿಲ್, ಲಡಾಖ್ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈಗಾಗಲೇ, ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಕಾರ್ಗಿಲ್ ಭಾಗದ ಚಿತ್ರೀಕರಣ ಮುಗಿಸಿ, ಈ ವರ್ಷ ಚಿತ್ರ ಬಿಡುಗಡೆ ಮಾಡುವ ಯೋಚನೆಯಲ್ಲಿ ಚಿತ್ರತಂಡವಿದೆ.