ಮದುವೆಗೆ ಇಟ್ಟಿದ್ದ ಹಣ ಸಹಾಯಕ್ಕೆ!

Sanjana
Published on

ಬೆಂಗಳೂರು: ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿರುವ ಚಿತ್ರರಂಗದ ಮಂದಿಯ ಪೈಕಿ ಸಂಜನಾ ಗಲ್ರಾನಿ ಸಹ ಒಬ್ಬರು. ಕಳೆದ 24 ದಿನಗಳಿಂದ ಸಂಜನಾ, ತಮ್ಮ ಸಂಜನಾ ಗಲ್ರಾನಿ ೌಂಡೇಶನ್​ ಮೂಲಕ ಚಿತ್ರರಂಗದವರಷ್ಟೇ ಅಲ್ಲ, ಕಷ್ಟದಲ್ಲಿರುವವರಿಗೆ ರೇಷನ್​ ಕಿಟ್​ ವಿತರಿಸುವ ಮೂಲಕ, ಹಸಿದವರಿಗೆ ಅನ್ನದಾನ ಮಾಡುವ ಮೂಲಕ ಸ್ಪಂದಿಸುತ್ತಿದ್ದಾರೆ.

ಈ ಕುರಿತು "ವಿಜಯವಾಣಿ' ಜತೆಗೆ ಮಾತನಾಡಿದ ಅವರು, "ನನಗೆ ಮದುವೆ ಗ್ರಾಂಡ್​ ಆಗಿ ಮಾಡಿಕೊಳ್ಳಬೇಕು ಎಂಬ ಆಸೆ ಇತ್ತು. ಎಲ್ಲರನ್ನೂ ಕರೆಯಬೇಕು ಅಂತ ಕನಸಿತ್ತು. ಆದರೆ, ಮೊದಲ ಲಾಕ್​ಡೌನ್​ನಿಂದ ಅದು ಸಾಧ್ಯವಾಗಲಿಲ್ಲ. ಚಿತ್ರರಂಗದವರನ್ನೆಲ್ಲ ಕರೆದು ಊಟ ಹಾಕಿಸಬೇಕು ಎಂಬ ಕನಸು ನನಸಾಗಲಿಲ್ಲ. ಈಗ ಚಿತ್ರರಂಗದ ಹಲವರು ಕಷ್ಟದಲ್ಲಿದ್ದಾರೆ. ಮದುವೆಗೆ ಅಂತ ಇಟ್ಟಿದ್ದ ದುಡ್ಡಿನಲ್ಲಿ ಇದೀಗ ಕಿಟ್​ಗಳನ್ನು ವಿತರಿಸುತ್ತಿದ್ದೇನೆ. ಸಂಭ್ರಮಕ್ಕಿಂತ ಜನರ ನೋವಿಗೆ ಸ್ಪಂದಿಸುವುದು ಬಹಳ ಮುಖ್ಯ. ಈಗಾಗಲೇ, ಚಿತ್ರರಂಗದ ವಿವಿಧ ವಲಯಗಳ 500ಕ್ಕೂ ಹೆಚ್ಚು ಜನರಿಗೆ ಕಿಟ್​ ವಿತರಿಸಲಾಗಿದೆ' ಎನ್ನುತ್ತಾರೆ ಸಂಜನಾ.

ಇನ್ನು, ಕಳೆದ 24 ದಿನಗಳಿಂದ ಅವರು ಪ್ರತಿದಿನ 500ಕ್ಕೂ ಹೆಚ್ಚು ಜನರಿಗೆ ಆಹಾರ ವಿತರಿಸುತ್ತಿದ್ದಾರೆ. "ಮೊದಲ 12 ದಿನಗಳ ಕಾಲ ಶ್ರೀಕೃಷ್ಣ ಪರಮಾತ್ಮ ೌಂಡೇಶನ್​ ಅವರು ಅಡುಗೆ ಮಾಡಿ ಕೊಡುತ್ತಿದ್ದರು. ಅದನ್ನು ಹಂಚುವ ಕೆಲಸ ನಮ್ಮದಾಗಿತ್ತು. ಮೂರು ಪ್ರದೇಶಗಳಲ್ಲಿ ವಾಟ್ಸಪ್​ ಗ್ರೂಪ್​ ಮಾಡಿ, ಅವರಿಗೆ ಇಂತಿಷ್ಟು ಸಮಯಕ್ಕೆ ಬರುತ್ತೇವೆ ಎಂದು ಹೇಳಿ, ಆ ಸಮಯಕ್ಕೆ ಹೋಗಿ ಹಂಚುತ್ತಿದ್ದೆವು. ಅವರು ನಿಲ್ಲಿಸಿದ ನಂತರ, ನಾವೇ ನಮ್ಮ ಮನೆಯ ಕಾರ್​ ಪಾರ್ಕಿಂಗ್​ನಲ್ಲೇ ಅಡುಗೆ ಮಾಡಿ, ಕಷ್ಟದಲ್ಲಿರುವವರಿಗೆ ಹಂಚಿದೆವು. ಜನ ಬರುತ್ತಾರೋ ಇಲ್ಲವೋ ಎಂಬ ಭಯವಿತ್ತು. ಸ್ವಲ್ಪ ಹೊತ್ತಿನಲ್ಲೇ ಮಾಡಿದ ಅಷ್ಟೂ ಅಡುಗೆ ಖಾಲಿಯಾಯಿತು. ಹೀಗೆ ಪ್ರತಿ ದಿನ 500ಕ್ಕೂ ಹೆಚ್ಚು ಜನರಿಗೆ ಊಟ ಹಾಕುತ್ತಿದ್ದೇವೆ' ಎನ್ನುತ್ತಾರೆ ಸಂಜನಾ. ಕಿಟ್​ ವಿತರಣೆ ಮತ್ತು ಅನ್ನದಾನ ಮಾಡುವುದರ ಜತೆಗೆ, ತರಕಾರಿ ಸಹ ಹಂಚಿದ್ದಾರಂತೆ ಸಂಜನಾ. "ನಾನು ಯಾರ ಬಳಿಯೂ ದುಡ್ಡು ಕೇಳಲಿಲ್ಲ. ಕೆಲವರು ತಾವೇ ಮುಂದೆ ಬಂದು, ಆಹಾರ ಸಾಮಗ್ರಿ ಮತ್ತು ತರಕಾರಿಗಳನ್ನು ಕೊಟ್ಟಿದ್ದಾರೆ. ಅದನ್ನು ೌಂಡೇಶನ್​ ಮೂಲಕ ಹಂಚಿದ್ದೇನೆ' ಎನ್ನುವ ಸಂಜನಾ, ಲಾಕ್​ಡೌನ್​ ಮುಗಿಯುವವರೆಗೂ ಸಹಾಯವನ್ನು ಮುಂದುವರೆಸುವುದಕ್ಕೆ ಯೋಚಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net